ಮೈಸೂರು : ರಾಜ್ಯದಲ್ಲಿ ಶೇ.16 ರಷ್ಟು ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯಕ್ಕೆ 4 ಲಕ್ಷ ಕೋಟಿಯ ರಾಜ್ಯ ಬಜೆಟ್‍ನಲ್ಲಿ ಶೇ.1 ರಷ್ಟೂ ಅನುದಾನ ಸಿಕ್ಕಿಲ್ಲ, ಆದರೂ ನಾವು ತೃಪ್ತರಾಗಿದ್ದೇವೆ. ಆದರೇ, ಬಿಜೆಪಿಯವರು ಇದನ್ನೆ ಹಲಾಲ್ ಬಜೆಟ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಂ ಪದ ಬಿಟ್ಟು ಅವರು ಮಾತನಾಡಿ ತೋರಿಸಲಿ ಎಂದು ಶಾಸಕ, ಕೆಪಿಸಿಸಿ ಕಾಯಾಧ್ಯಕ್ಷ ತನ್ವೀರ್ ಸೇಠ್ ಸವಾಲು ಹಾಕಿದರು.
ನರಸಿಂಹರಾಜ ಕ್ಷೇತ್ರದ ರಾಜೀವ್ ನಗರದಲ್ಲಿರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಎಸ್‍ಆರ್ ಅನುದಾನ 1.25 ಕೋಟಿ ಹಣದಲ್ಲಿ ಮೊದಲ ಮಹಡಿಯಲ್ಲಿ 9 ಕೊಠಡಿ ನಿರ್ಮಿಸಿ ಇದೀಗ 75 ಲಕ್ಷ ರೂ ವೆಚ್ಚದಲ್ಲಿ ಅದಕ್ಕೆ ಆರ್‍ಸಿಸಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿಯವರು ಬಳಕೆ ಮಾಡುವ ಪದಗಳನ್ನು ನಾನು ಬಳಸುವುದಿಲ್ಲ, ನಮ್ಮ ಸಂಸ್ಕøತಿಯೇ ಬೇರೆ, ಅವರ ಬಂಡವಾಳವೇ ಮುಸಲ್ಮಾನರು, ನಾವು ರಾಷ್ಟ್ರದಲ್ಲಿ ಶೇ.20 ರಷ್ಟು ಜನಸಂಖ್ಯೆ ಇದ್ದೇವೆ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾವು ಹೋರಾಡಿ ಪ್ರಾಣ ಕಳೆದುಕೊಂಡಿದ್ದೇವೆ. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಬಿಜೆಪಿ ತನ್ನ ಅಧಿಕಾರದಲ್ಲಿ ಮಠಗಳಿಗೆ, ದೇವಸ್ಥಾನಗಳ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದೆ. ನಾವೆಂದೂ ಅದರ ಬಗ್ಗೆ ಪ್ರಶ್ನೆ ಮಾಡಿಲ್ಲ.
ಬಿಜೆಪಿಯವರು ಯಾವತ್ತೂ ದೇಶ ಕಟ್ಟುವ ಕೆಲಸ ಮಾಡಿಲ್ಲ, ಅವರದೇನಿದ್ದರೂ ದೇಶ ವಿಭಜನೆಯ ಕೆಲಸ. ಯುವ ಜನಾಂಗವನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.
ನಮಗೆ ಇನ್ನೂ ಹೆಚ್ಚಿನ ಅನುದಾನ ಸಿಗಬೇಕಿತ್ತು, ಸಿಕ್ಕಿಲ್ಲ, ಅದನ್ನು ದಕ್ಕಿಸಿಕೊಳ್ಳುವ ಬಗ್ಗೆ ನಮ್ಮ ಪ್ರಯತ್ನ ಮುಂದುವರಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಅಝೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್, ಮುಖಂಡರಾದ ಎಂ.ಎನ್.ಮಹದೇವ, ಡಾ.ಹಕೀಂ, ಶ್ರೀನಿವಾಸ, ಶೌಕತ್ ಅಲಿಖಾನ್, ಅಫ್ರೋಜ್ ಖಾನ್, ಪ್ರೊ.ನಬೀಜಾನ್, ಶಿವಲಿಂಗು ಮುಂತಾದವರು ಇದ್ದರು.
ಶೀಘ್ರದಲ್ಲೇ ಪ್ರಥಮ ದರ್ಜೆ ಕಾಲೇಜು
ಶಿಕ್ಷಣದಿಂದ ಸುಶೀಕ್ಷಿತ ಸಮಾಜ ನಿರ್ಮಾಣ ಸಾಧ್ಯ. ಇದಕ್ಕಾಗಿ ನಾವು ನಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದ್ದೇವೆ. ಕಳೆದ 2 ವರ್ಷಗಳಿಂದಲೂ ಎನ್‍ಆರ್ ಕ್ಷೇತ್ರದಲ್ಲಿ ಪ್ರಥಮ ದರ್ಜೆ ಕಾಲೇಜು ಬೇಕು ಎನ್ನುವ ಬೇಡಿಕೆಯನ್ನು ಇಲ್ಲಿನ ಮತದಾರರು ಇಟ್ಟಿದ್ದಾರೆ. ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಿಲ್ಲ. ಇದೇ ಸಾಲಿನಲ್ಲಿ ಇಲ್ಲಿಗೆ ಪ್ರಥಮ ದರ್ಜೆ ಕಾಲೇಜು ತೆರೆಯುವ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು.
ತನ್ವೀರ್ ಸೇಠ್, ಶಾಸಕರು
0 ಕಾಮೆಂಟ್‌ಗಳು