ವರದಿ : ನಜೀರ್ ಅಹಮದ್
ಮೈಸೂರು: ಪ್ಯಾಲೆಸ್ತೈನ್ ದೇಶವನ್ನು ಗುರಿಯಾಗಿಸಿ ಇಸ್ರೆಲ್ ನಡೆಸುತ್ತಿರುವ ಜನಾಂಗೀಯ ಹತ್ಯೆಯನ್ನು ಖಂಡಿಸಿ ಎಸ್‌ಡಿಪಿಐ ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಸಂತ ಫಿಲೋಮಿನಾ ಚರ್ಚ್ ಎದುರು ಶನಿವಾರ ಮದ್ಯಾಹ್ನ ಜಮಾಯಿಸಿದ ನೂರಾರು ಎಸ್‌ಡಿಪಿಐ ಕಾರ್ಯಕರ್ತರು ಇಸ್ರೆಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ಧೇಶಿಸಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಇಸ್ರೆಲ್ ಕದನ ವಿರಾಮ ಘೋಷಿಸಿದ ನಂತರ ಏಕಾಏಕಿ ಪ್ಯಾಲೆಸ್ಟಿನ್ ಮೇಲೆ ವೈಮಾನಿಕ ದಾಳಿ ನಡೆಸಿ ೫೦೭ ಜನರನ್ನು ಕೊಂದು ಹಾಕಿದೆ. ಇದರಲ್ಲಿ ೨೦೦ಕ್ಕೂ ಹೆಚ್ಚು ಮಕ್ಕಳು ಮೃತರಾಗಿದ್ದಾರೆ. ಅಮೆರಿಕಾ ದೇಶ ಪರೋಕ್ಷವಾಗಿ ಇಸ್ರೆಲ್ ಜನಾಂಗೀಯ ಹತ್ಯೆಗೆ ಕುಮ್ಮಕ್ಕು ನೀಡಿದರೆ, ವಿಶ್ವಸಂಸ್ಥೆ ಕಣ್ಣಿದ್ದು ಕುರುಡಾಗಿದೆ ಎಂದು ಕಿಡಿ ಕಾರಿದರು.
ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಸೇರಿದಂತೆ ಇಡೀ ಜಗತ್ತು ಇಸ್ರೆಲ್‌ನ ಈ ಅಮಾನವೀಯ ಹತ್ಯಾಕಾಂಡವನ್ನು ವಿರೋಧಿಸುತ್ತಿಲ್ಲದಿರುವುದು ಆಘಾತಕಾರಿ ವಿಷಯವಾಗಿದೆ. ಇದುವರೆಗೂ ಇಸ್ರೆಲ್ ದಾಳಿಯಿಂದ ಸುಮಾರು ೫೦ ಸಾವಿರ ಪ್ಯಾಲೆಸ್ತೀನರು ಹತರಾಗಿದ್ದಾರೆ. ಇದರಲ್ಲಿ ಅರ್ಧದಷ್ಟು ಮಕ್ಕಳು ಸಾವನ್ನಪ್ಪಿರುವುದು ಅತ್ಯಂತ ದಾರುಣ ಘಟನೆಯಾಗಿದೆ. ನಾವು ಪ್ಯಾಲೆಸ್ಟೈನ್ ಜನತೆಗೆ ಮಾನವೀಯ ನೆಲೆಯಲ್ಲಿ ಬೆಂಬಲ ನೀಡಬೇಕಿದೆ ಎಂದು ಹೇಳಿದರು.
ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರ್ದಯ ದಾಳಿಗಳನ್ನು ಕೇವಲ ಖಂಡಿಸಿದರೆ ಸಾಲದು, ಇಡೀ ಜಗತ್ತು ಯುದ್ಧವನ್ನು ಸಮಾಪ್ತಿಗೊಳಿಸುವತ್ತ ಕಾರ್ಯಕ್ರಮ ರೂಪಿಸಬೇಕು. ತಮ್ಮ ಸ್ವಂತ ನೆಲವನ್ನು ಕಳೆದುಕೊಂಡಿರುವ ನಿರಪರಾಧಿ ಪ್ಯಾಲೆಸ್ತೈನ್ ನಾಗರಿಕರ ಮೇಲೆ ನಡೆಯುತ್ತಿರುವ ಕೊಲೆಗಳನ್ನು ತಕ್ಷಣವೇ ನಿಲ್ಲಿಸಲು ಜಾಗತಿಕ ನಾಯಕರಿಗೆ ಮನವಿ ಮಾಡಬೇಕೆಂದು ಒತ್ತಾಯಿಸಿದರು.
ಪ್ಯಾಲೆಸ್ತೈನ್ ಸ್ವಾತಂತ್ರ್ಯ ಹೋರಾಟವನ್ನು ಭಾರತ ಮಹಾತ್ಮಾಗಾಂಧಿ ಅವರ ಕಾಲದಿಂದಲೂ ಬೆಂಬಲಿಸಿದೆ. ಪ್ರಸ್ತುತ ಭಾರತ ಸರ್ಕಾರವು ಇಸ್ರೇಲ್‌ನ ವಿರುದ್ಧ ತಕ್ಷಣವೇ ಗಂಭೀರ ನಿಲುವು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಅಧ್ಯಕ್ಷ ರಫತ್ ಖಾನ್, ರಾಜ್ಯ ಕಾರ್ಯದರ್ಶಿ ಮೌಲಾನಾ ಅಕ್ರಮ್, ಜಿಲ್ಲಾ ಕಾರ್ಯದರ್ಶಿ ಆಯೇಶಾ ಜಬಿ ಅವರುಗಳು ಸಹ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಗಾಜಾದಲ್ಲಿನ ಗಂಭೀರ ಮಾನವೀಯ ಬಿಕ್ಕಟ್ಟಿನ ಬಗ್ಗೆ ಬೆಳಕು ಚೆಲ್ಲಿದರು. ತಕ್ಷಣವೇ ಯುದ್ಧ ವಿರಾಮ, ನಿರ್ಬಂಧವಿಲ್ಲದ ಮಾನವೀಯ ಸಹಾಯ ಹಾಗೂ ಇಸ್ರೇಲ್‌ನ ಯುದ್ಧ ಅಪರಾಧಗಳಿಗೆ ಕಡಿವಾಣ ವಿಧಿಸುವಂತೆ ಜಾಗತಿಕ ನಾಯಕತ್ವಕ್ಕೆ ಮನವಿ ಮಾಡಿದರು.
ಎಸ್‌ಡಿಪಿಐ ರಾಜ್ಯ ಕೋಶಾಧಿಕಾರಿ ಅಮ್ಜದ್ ಖಾನ್, ಜಿಲ್ಲಾ ನಾಯಕರಾದ ಸಫಿಯುಲ್ಲಾ, ಫಿರ್ದೋಸ್, ಫರ್ಧೀನ್, ಮೌಲಾನಾ ನೂರುದ್ದೀನ್, ಅಲ್ತಾಫ್, ತಬ್ರೇಜ್ ಸೇಠ್, ಮನ್‌ಸೂರ್ ಖಾನ್, ಸುಹೇಲ್ ಲತಿಫ್, ಫೈರೋಜ್, ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ನಾಯಕಿಯರು ಸೇರಿದಂತೆ ಹಲವಾರು ಪ್ರಮುಖ ನಾಯಕರು ಪ್ಯಾಲೆಸ್ತೈನ್ ಪರವಾಗಿ ಬೆಂಬಲ ವ್ಯಕ್ತಪಡಿಸಿದರು.
0 ಕಾಮೆಂಟ್‌ಗಳು