ಕಾವೇರಿ ನರ್ಸಿಂಗ್ ಸ್ಕೂಲ್ ಮತ್ತು ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಸ್ವೀಕಾರ ಸಮಾರಂಭ


 ವರದಿ: ನಜೀರ್ ಅಹಮದ್

ಮೈಸೂರು : ನರ್ಸಿಂಗ್ ವೃತ್ತಿ ಎನ್ನುವುದು ಒಂದು ಅಸಾಮಾನ್ಯ ಸೇವೆ ಸಲ್ಲಿಸುವ ಶ್ರೇಷ್ಠ ವೃತ್ತಿಯಾಗಿದ್ದು, ರೋಗಿಗಳು ನಿಮ್ಮಲ್ಲಿ ದೇವರನ್ನು ಕಾಣುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೇಳಿದರು.

ನಗರದ ಕಾವೇರಿ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್ ಸಭಾಂಗಣದಲ್ಲಿ ಬುಧವಾರ ಕಾವೇರಿ ಸ್ಕೂಲ್ ಅಂಡ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಸೆಂಟ್ ಆಲ್ಫೋನ್ಸಾ ಕಾಲೇಜ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಇಂದು ನರ್ಸಿಂಗ್ ವಿದ್ಯಾರ್ಥಿಗಳ ಪಾಲಿನ ಅಮೂಲ್ಯವಾದ ದಿನ, ಒಂದು ವಿಶಿಷ್ಟ ಸೇವೆಗೆ ನೀವೆಲ್ಲಾ ಮುಂದಾಗಿದ್ದೀರಿ, ಶಿಕ್ಷಕರು, ವೈದ್ಯರು ಮತ್ತು ದಾದಿಯರು ಮನುಷ್ಯ ರೂಪದಲ್ಲಿರುವ ದೇವರುಗಳು ಎಂದು ಜಗತ್ತೇ ಗೌರವಿಸುತ್ತದೆ. ಪ್ರಪಂಚದ ಎಲ್ಲ ವೃತ್ತಿಗಳಲ್ಲಿ ಇದೊಂದು ಪ್ರತಿಷ್ಠಿತ ವೃತ್ತಿಯಾಗಿದೆ. ಇದರ ಸಂಪೂರ್ಣ ಕೌಶಲ್ಯಗಳನ್ನು ಕಲಿತು ಜನಸೇವೆಗೆ ಮುಂದಾಗಿ ಎಂದು ಶುಭ ಹಾರೈಸಿದರು.

ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಇಂದಿನ ದಿನಗಳಲ್ಲಿ ಹುಲಿಯ ಮೇಲೆ ಸವಾರಿ ಮಾಡಿದಂತೆ, ಯಾರಾದರೂ ಬದುಕಿನಲ್ಲಿ ಮುಂದೆ ಬರುವುದನ್ನು ಕಂಡರೆ, ನಮ್ಮ ವ್ಯವಸ್ಥೆ ಅವರನ್ನು ಹೇಗೆ ಬೀಳಿಸುವುದು ಎಂದು ಯೋಚಿಸುತ್ತದೆ. ಇಂತಹ ಅತ್ಯಂತ ಕಷ್ಟಕರವಾದ ದಿನಗಳಲ್ಲಿ ಡಾ.ಚಂದ್ರಶೇಖರ್ ಅವರು ಇಂತಹದೊಂದು ಭವ್ಯ ಕಾಲೇಜನ್ನು ನಿರ್ಮಿಸಿ ನಿಮಗೆಲ್ಲಾ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ. ಉತ್ತಮ ಫಲಿತಾಂಶ ತರುವುದರ ಜತೆಗೆ ಬದುಕಿನಲ್ಲಿ ನಿಮ್ಮ ವೃತ್ತಿ ಘನತೆಯನ್ನು ಕಾಪಾಡಿಕೊಂಡರೆ ಅವರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಕಾವೇರಿ ಸ್ಕೂಲ್ ಅಂಡ್ ಕಾಲೇಜ್ ಆಫ್ ನರ್ಸಿಂಗ್ ಸಂಸ್ಥಾಕರಾದ ಡಾ.ಚಂದ್ರಶೇಖರ್ ಮಾತನಾಡಿ, ಆರೋಗ್ಯ ಸೇವಾ ವೃತ್ತಿಗಳು ಜಗತ್ತಿನಲ್ಲಿ ಅತ್ಯಂತ ಬೇಡಿಕೆ ಇರುವ ವೃತ್ತಿಗಳಾಗಿವೆ. ಪ್ರಮುಖವಾಗಿ ಇದು ಕೌಶಲ್ಯಾಧಾರಿತ ವೃತ್ತಿಯಾಗಿದ್ದು, ಯಾರು ಹೆಚ್ಚಿನ ಕೌಶಲ್ಯವನ್ನು ಕಲಿಯುತ್ತಾರೋ ಅವರಿಗೆ ಜಗತ್ತಿನಾದ್ಯಂತ ಬೇಡಿಕೆ ಇರುತ್ತದೆ. ಒಬ್ಬ ರೋಗಿ ಎಷ್ಟೇ ಶ್ರೀಮಂತ ವ್ಯಕ್ತಿ ಆಗಿದ್ದರೂ ಅವರನ್ನು ಆರೈಕೆ ಮಾಡುವ ನರ್ಸ್ ಆ ರೋಗಿಗೆ ಎಂತಹ ಸಂದರ್ಭದಲ್ಲೂ ಬದುಕುವ ಧೈರ್ಯ ಮತ್ತು ಉತ್ಸಾಹ, ಭರವಸೆ ತುಂಬಲು ಸಾಧ್ಯವಿದೆ. ಇಂತಹ ವೃತ್ತಿಯನ್ನು ಅತ್ಯಂತ ಪ್ರೀತಿಯಿಂದ, ವಿಶ್ವಾಸದಿಂದ ಕಲಿತು ಸೇವೆಗೆ ಮುಂದಾಗಬೇಕು, ಯಾವುದೇ ಪದವೀಧರರು ತಾವು ಪದವಿ ಪಡೆದ ನಂತರ ಪ್ರತಿಜ್ಞಾವಿಧಿ ಸ್ವೀಕರಿಸಿದರೆ, ನರ್ಸ್ ಪದವಿಯನ್ನು ಪಡೆಯುವ ಮುನ್ನ ಪ್ರಾರಂಭದಲ್ಲೇ ಪ್ರತಿಜ್ಞೆ ಸ್ವೀಕರಿಸಬೇಕಾಗುತ್ತದೆ. ಇಂತಹ ಪದವಿಯನ್ನು ಅತ್ಯಂತ ಶಿಸ್ತು, ಸಂಯಮದಿಂದ ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಗಣ್ಯರನ್ನು ಅಭಿನಂದಿಸಲಾಯಿತು. ಕರ್ನಾಟಕ ರಾಜ್ಯ ಡಿಪ್ಲೋಮೋ ಇನ್ ನರ್ಸಿಂಗ್ ಎಕ್ಸಾಮಿನೇಷನ್ ಬೋರ್ಡ್ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಸುರಕ್ಷಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸರಳಚಂದ್ರಶೇಖರ್, ಪ್ರಾಂಶುಪಾಲರಾದ ರಾಜಾಕಣ್ಣನ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಹಸ್ತದಿಂದ ದೀಪ ಬೆಳಗಿಸಿಕೊಂಡು ಪ್ರತಿಜ್ಞೆ ಸ್ವೀಕರಿಸಿದ್ದು ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾಗಿತ್ತು. ಪೋಷಕರು ನರ್ಸಿಂಗ್ ಪೋಷಾಕಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ತಮ್ಮ ಮಕ್ಕಳನ್ನು ಕಣ್ತುಂಬಿಕೊಂಡರು.

ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು