ವರದಿ: ನಜೀರ್ ಅಹಮದ್
ಮೈಸೂರು : ಎನ್‍ಆರ್ ಕ್ಷೇತ್ರದ ದುರ್ಬಲ ವರ್ಗದ ಜನರಿಗೆ ಉಚಿತವಾಗಿ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಶಾಸಕರಾದ ತನ್ವೀರ್ ಸೇಠ್ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಜೀವ್ ನಗರದ ಸೂರ್ಯನಾರಾಯಣ ದೇವಾಲಯದ ಬಳಿ ‘ನಮ್ಮ ಕ್ಲೀನಿಕ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ದುರ್ಬಲ ವರ್ಗದ ಜನರ ಆರೋಗ್ಯ ಬಲವರ್ಧನೆಗಾಗಿ ಪಿ.ಎಂ ಅಭಿಮ್ ಯೋಜನೆಯಡಿ ‘ನಮ್ಮ ಕ್ಲಿನಿಕ್’ ಸೇವೆಯನ್ನು ಪ್ರಾರಂಭಿಸಲಾಗಿದೆ.
ತಳಮಟ್ಟದಿಂದ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ಮತ್ತು ಸುಧಾರಣೆ ತರುವ ದೃಷ್ಟಿಯಿಂದ, ಆರೋಗ್ಯ ಕ್ಷೇತ್ರಕ್ಕಾಗಿ ನೀಡುವ ಅನುದಾನದಡಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಯಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಸರ್ಕಾರ ನಗರ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ‘ನಮ್ಮ ಕ್ಲಿನಿಕ್’ಗಳನ್ನು ತೆರೆಯಲಾಗುತ್ತಿದೆ. ನಗರ ಪ್ರದೇಶದಲ್ಲಿ ದುರ್ಬಲ ವರ್ಗದವರು ವಾಸಿಸುತ್ತಿರುವ ಬಡಾವಣೆಗಳಲ್ಲಿ ಸಮುದಾಯ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಈ ಭಾಗದ ಜನರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಶಾಸಕರಾದ ತನ್ವೀರ್ ಸೇಠ್ ಸಲಹೆ ನೀಡಿದರು.
ವಿಕೇಂದ್ರಿಕೃತ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಮತ್ತು ಸುಧಾರಿತ ಸಮುದಾಯ ಆರೋಗ್ಯ ಪ್ರಕ್ರಿಯೆಗಳನ್ನು ವಿಶೇಷವಾಗಿ ಕೊಳಗೇರಿ ಮತ್ತು ಕೊಳಗೇರಿ ಸ್ವರೂಪದ ಪ್ರದೇಶಗಳು ಹಾಗೂ ದುರ್ಬಲವರ್ಗದ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಸಮುದಾಯ ಆರೋಗ್ಯ ಪ್ರಕ್ರಿಯೆಗಳಿಗೆ ಒತ್ತನ್ನು ಸರ್ಕಾರ ನೀಡುತ್ತಿದೆ.
ಸಾರ್ವಜನಿಕ ಆರೋಗ್ಯ ಕಣ್ಣಾವಲು, ಸಮಯೋಚಿತ ವರದಿ ಮತ್ತು ವಿಶ್ಲೇಷಣೆಯನ್ನು ಬಲಪಡಿಸುವುದು.
ಸಮುದಾಯದ ಸಹಭಾಗಿತ್ವವನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳು ಸಾರ್ವತ್ರಿಕವಾಗಿ ತಲುಪಲು ಕ್ರಮ ಕೈಗೊಳ್ಳುವುದು. ನಮ್ಮ ಕ್ಲಿನಿಕ್‍ನಲ್ಲಿ ಸಾರ್ವಜನಿಕರಿಗೆ 12 ರೀತಿಯ ಸೇವೆಗಳು ಲಭ್ಯವಿರುತ್ತವೆ. ಯಾವುದೇ ಶುಲ್ಕವಿರುವುದಿಲ್ಲ. ಎರಡು ಮೂರು ನಮ್ಮ ಕ್ಲೀನಿಕ್ ಸೇರಿದಂತೆ ಆಂಬುಲೆನ್ಸ್ ಸೇವೆಯನ್ನೂ ಸಹ ಒದಗಿಸಲಾಗುತ್ತಿದೆ ಎಂದು ಶಾಸಕರು ಹೇಳಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಮ್ಮ ಕ್ಲೀನಿಕ್ ಪ್ರಾರಂಭಿಸಲಾಗಿದೆ. ಈ ಯೋಜನೆಯನ್ನು ಎನ್‍ಆರ್ ಕ್ಷೇತ್ರಕ್ಕೆ ತರುವುದರಲ್ಲಿ ಶಾಸಕ ತನ್ವೀರ್ ಸೇಠ್ ಅವರ ಪಾತ್ರ ಮತ್ತು ಶ್ರಮ ದೊಡ್ಡದು ಎಂದರು.
ನಮ್ಮ ಕ್ಲಿನಿಕ್‍ನಲ್ಲಿ ಗರ್ಭಿಣಿ ಮತ್ತು ಜನನ ಸಮಯದ ಆರೈಕೆ,
ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರೆಯದವರಿಗೆ ಸೇವೆಗಳು, ಸಾರ್ವಜನಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭನಿರೋಧಕ ಸೇವೆಗಳು,
ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಖಾಯಿಲೆಗಳಿಗೆ ಸೇವೆ, ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಚಿಕಿತ್ಸೆ,
ಸಕ್ಕರೆ ಖಾಯಿಲೆ, ದೀರ್ಘಾವಧಿ ಖಾಯಿಲೆಗಳು,
ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್, ಬಾಯಿಯ ಆರೋಗ್ಯ ಸಮಸ್ಯೆಗಳು, ಕಣ್ಣಿನ ತಪಾಸಣೆ,
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳು ಸೇರಿದಂತೆ 12 ರೀತಿಯ ಸೇವೆಗಳು ಲಭ್ಯವಿರುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಆರ್‍ಸಿಎಚ್ ಅಧಿಕಾರಿ ಮೊಹಮ್ಮದ್ ಸಿರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್, ಸಿ.ಎನ್.ಮಂಜುನಾಥ್, ಉಪಾಧ್ಯಕ್ಷರಾದ ಶಹೇನ್‍ಷಾ ಅಹಮದ್, ಕೆಪಿಸಿಸಿ ಕೋ ಆರ್ಡಿನೇಟರ್ ಶೌಕತ್ ಅಲಿಖಾನ್, ಕಾಂಗ್ರೆಸ್ ಮುಖಂಡರಾದ ಸೈಯದ್ ಹಷ್ರತುಲ್ಲಾ, ಪ್ರದೀಪ್ ಚಂದ್ರ, ಶ್ರೀಧರ್, ಎಂ.ಎನ್.ಮಹದೇವು, ಸತ್ಯರಾಜು, ಅಣ್ಣಯ್ಯ, ಅಫ್ರೋಜ್ ಖಾನ್, ಶಿಫ್ಟನ್, ಪ್ರಮೋದ್ ಮೊಹಮ್ಮದ್ ಮುಮ್ತಾಜ್, ಸೈಯದ್ ಫಾರೂಖ್, ಕಮಲಮ್ಮ, ಉದಯಕುಮಾರ್, ಮೊಹಮ್ಮದ್ ರಫಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ನಮ್ಮ ಕ್ಲೀನಿಕ್’ ವ್ಯಾಪ್ತಿಯಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಾರೆ. ವಿಶೇಷವಾಗಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೈಕೆಗೆ ಮಾಡಲಾಗುವುದು. ಮಗು ಹುಟ್ಟಿದ ನಂತರ ತೆಗೆದುಕೊಳ್ಳಬೇಕಾದ ಲಸಿಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಸೂಕ್ತ ಸಮಯದಲ್ಲಿ ಲಸಿಕೆ ತೆಗೆದುಕೊಂಡರೆ ಮಗುವಿಗೆ ಬರಬಹುದಾದ 30 ಕಾಯಿಲೆಗಳನ್ನು ತಡೆಗಟ್ಟಬಹುದು.
• ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ
ನಮ್ಮ ಕ್ಲೀನಿಕ್‍ನಲ್ಲಿ ಎಲ್ಲ ಸೇವೆಗಳು ಉಚಿತವಾಗಿರುತ್ತವೆ. ರೋಗಿಗಳು ವೈದ್ಯರ ಸಲಹೆ ಪಡೆಯಬೇಕು. ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು, ಬರುವ ರೋಗಿಗಳ ಜತೆ ವೈದ್ಯರು ಮಾನವೀಯತೆಯಿಂದ ವರ್ತಿಸುವ ಮೂಲಕ ತಮ್ಮ ವೃತ್ತಿ ಗೌರವ ಕಾಪಾಡಿಕೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ ರೋಗಿಯನ್ನು ಬೇರೆ ಆಸ್ಪತ್ರೆಗಳಿಗೆ ಕಳಿಸಲು ತಡ ಮಾಡಬಾರದು.
• ತನ್ವೀರ್ ಸೇಠ್, ಶಾಸಕರು
0 ಕಾಮೆಂಟ್‌ಗಳು