’ಕೆವಿಸಿ ಆಸ್ಪತ್ರೆ ವಿರುದ್ಧ ಎಲ್ಲ ಆರೋಪಗಳು ಸುಳ್ಳು’ ಆಸ್ಪತ್ರೆ ಆಡಳಿತ ಸ್ಪಷ್ಟನೆ : ಅಪಪ್ರಚಾರ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ


 ಮೈಸೂರು: ನಗರದ ಕೆವಿಸಿ ಆಸ್ಪತ್ರೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದು, ಅಂತಹವರ ವಿರುದ್ಧ ಈಗಾಗಲೇ ದೂರು ದಾಖಲಿಸಲಾಗಿದೆ. ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಕೆವಿಸಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ನಂದೀಶ್ ಕುಮಾರ್ ಹೇಳಿದರು.

ನಗರದ ಕೆವಿಸಿ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಫೆ 15 ರಂದು ಮಹಿಳೆಯೊಬ್ಬರು ತಮ್ಮ ಮಗುವನ್ನು ಕರೆದುಕೊಂಡು ನಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಮಗುವಿಗೆ ಸ್ವಲ್ಪ ತರಚಿದ ಗಾಯವಾಗಿತ್ತು, ಮುಂಜಾಗ್ರತಾ ಕ್ರಮವಾಗಿ ಸ್ಕ್ಯಾನಿಂಗ್ ಮಾಡಿಸಿದಾಗ ಯಾವುದೇ ಅಪಾಯವಿಲ್ಲ ಎಂದು ದೃಢಪಟ್ಟಿತ್ತು, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಪೋಷಕರ ಸಲಹೆ ಮೇರೆಗೆ ಮಗುವನ್ನು ರಾತ್ರಿ ಆಸ್ಪತ್ರೆಯ ಸಾಮಾನ್ಯ ವಾರ್ಡ್‍ನಲ್ಲಿ ಅಡ್ಮಿಟ್ ಮಾಡಿಕೊಂಡಿದ್ದೆವು. ಬೆಳಗ್ಗೆ ದಂತ ವೈದ್ಯರು ಬಂದು ಪರೀಕ್ಷೆ ಮಾಡುತ್ತಾರೆ ಎಂದು ಹೇಳಿದ್ದೆವು. ಆದರೇ, ಮಹಿಳೆ ಆತುರ ಮಾಡಿ ಇನ್ನಿಲ್ಲದ ರಂಪ ಮಾಡಿದಾಗ ನಾವು ವಿಧಿ ಇಲ್ಲದೆ ಸಮೀಪದ ಪೊಲೀಸ್ ಠಾಣೆಗೆ ವಿಷಯ ತಿಳಿಸಿದಾಗ ಮಹಿಳಾ ಪೊಲೀಸರು ಆಗಮಿಸಿದರು. ಆಗಲೂ ಮಹಿಳೆ ವಿನಾ ಕಾರಣ ಕ್ಷುದ್ರರಾಗಿ ಆಸ್ಪತ್ರೆ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅಂದು ರಾತ್ರಿ ಮಗು ಆಸ್ಪತ್ರೆಗೆ ದಾಖಲಾಗಿದ್ದರೂ ನಾವು ಕೇವಲ 3.500 ರೂ ಶುಲ್ಕ ಪಡೆದಿದ್ದೇವೆ. ಒಂದು ತಿಂಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಆಸ್ಪತ್ರೆಯನ್ನು ತೇಜೋವಧೆ ಮಾಡುವ ಸುದ್ದಿ ಬಿತ್ತರವಾಗಿದೆ. ಇದರ ವಿರುದ್ಧ ನಾವು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ನ್ಯಾಯಾಲಯದ ಮೊರೆ ಹೋಗಲಾಗಿದೆ. ನಮ್ಮ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಾನವೀಯತೆ ಮೂಲಕ ಆರೈಕೆ ಮಾಡುತ್ತೇವೆ. ಯಾವುದೇ ಹೆಚ್ಚುವರಿ ಶುಲ್ಕವನ್ನು ನಾವು ವಿಧಿಸುವುದಿಲ್ಲ. ನಮ್ಮ ಆಸ್ಪತ್ರೆ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಸಹಿಸದ ಕೆಲವರು ನಮ್ಮ ಆಸ್ಪತ್ರೆ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಇದನ್ನು ಪ್ರಚಾರ ಮಾಡಲು ಮಾಧ್ಯಮ ಬಳಕೆ ಮಾಡಲಾಗಿದೆ. ಮಾಧ್ಯಮದವರು ನಮ್ಮ ಆಸ್ಪತ್ರೆ ವಿರುದ್ಧ ಸುದ್ದಿ ಮಾಡುವ ಮೊದಲು ಅದರ ಸತ್ಯಾಸತ್ಯತೆ ತಿಳಿಯಬೇಕಿತ್ತು. ಅಥವಾ ನಮ್ಮ ಸ್ಪಷ್ಟೀಕರಣವನ್ನಾದರೂ ಕೇಳಬೇಕಿತ್ತು. ಅದ್ಯಾವುದನ್ನೂ ಮಾಡದೆ ನಗರದ ಪ್ರತಿಷ್ಠಿತ ಆಸ್ಪತ್ರೆ ವಿರುದ್ಧ ಅಪಪ್ರಚಾರ ಮಾಡಿರುವುದು ಸರಿಯಲ್ಲ ಎಂದರು.

ಕಳೆದ ಹಲವು ವರ್ಷಗಳಿಂದ ನಾವು ಅವಿರತವಾಗಿ ಶ್ರಮಿಸಿ ಆಸ್ಪತ್ರೆಗೆ ಉತ್ತಮ ಹೆಸರು ಗಳಿಸಿಕೊಟ್ಟಿದ್ದೇವೆ. ಇದರಲ್ಲಿ ಹಲವಾರು ವೈದ್ಯರು ಮತ್ತು ಸಿಬ್ಬಂದಿಗಳ ಶ್ರಮವಿದೆ. ವೈದ್ಯರಾದ ನಮಗೂ ಕುಟುಂಬವಿದೆ. ಗೆಳೆಯರಿದ್ದಾರೆ. ನಿಸ್ವಾರ್ಥ ಸೇವೆಯ ಮೂಲಕ ನಾವು ಸಮಾಜದಲ್ಲಿ ಸಾಕಷ್ಟು ಗೌರವ ಸಂಪಾದನೆ ಮಾಡಿದ್ದೇವೆ. ಸುಳ್ಳು ಸುದ್ದಿಯ ಪ್ರಚಾರದಿಂದ ನಮ್ಮ ಗೌರವಕ್ಕೆ ಧಕ್ಕೆ ಬಂದಿದೆ. ಈ ಕಾರಣದಿಂದ ನಾವು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಏರಬೇಕಾಯಿತು ಎಂದು ಹೇಳಿದ ಅವರು, ಕೆವಿಸಿ ಆಸ್ಪತ್ರೆ ಬಡವರ ಆಸ್ಪತ್ರೆ. ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ಸೇವೆ ನೀಡುತ್ತಿದ್ದೇವೆ. ವಿನಾ ಕಾರಣ ನಮ್ಮ ಆಸ್ಪತ್ರೆ ವಿರುದ್ಧ ಅಪಪ್ರಚಾರ ನಡೆಸಿರುವ ಕಾರಣ ನಮ್ಮ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಮಾನಸಿಕ ನೋವು ಅನುಭವಿಸಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಕಾರ್ತಿಕ್ ಉಡುಪ, ಡಾ.ಎಂ.ಡಿ.ವೇಣುಗೋಪಾಲ್, ಡಾ.ದೀಪಕ್‍ಗೌಡ, ಡಾ.ರಾಜೇಶ್, ಡಾ.ದಯಾನಂದ್, ಜನರಲ್ ಮ್ಯಾನೇಜರ್ ಲೆನಿನ್, ಡಾ.ರಾಕೇಶ್ ಮತ್ತಿತರರು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು