5 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ತನ್ವೀರ್ ಸೇಠ್ ಭೂಮಿಪೂಜೆ
ವರದಿ: ನಜೀರ್ ಅಹಮದ್
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವನ್ನೇ ಹರಿಸಲಾಗಿದ್ದು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರು ರಾಜ್ಯದ ಅಭಿವೃದ್ಧಿಯನ್ನು ಮರೆಮಾಚುತ್ತಿದ್ದಾರೆ ಎಂದು ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್ ಪರೋಕ್ಷವಾಗಿ ಬಿಜೆಪಿಯನ್ನು ಕುಟುಕಿದರು.
ಎನ್‍ಆರ್ ಕ್ಷೇತ್ರದ ಎನ್‍ಆರ್ ಮೊಹಲ್ಲಾ ಬಡಾವಣೆಯ ಶಿವಾಜಿ ರಸ್ತೆಯಲ್ಲಿ 5 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಒಳಚರಂಡಿ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಕೇವಲ ಜಾತಿ ಮತ್ತು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ. ಅವರು ನಾವು ಮಾಡುತ್ತಿರುವ ಅಭಿವೃದ್ಧಿಯ ಬಗ್ಗೆ ಮಾತನಾಡುವುದಿಲ್ಲ. ಕೇವಲ ಧರ್ಮ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವುದರಲ್ಲೇ ಮಗ್ನರಾಗಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಬಯಸುವವರು ಈ ರೀತಿ ಮಾತನಾಡುವುದಿಲ್ಲ, ಅವರಿಗೆ ಅಧಿಕಾರ ಬೇಕು. ಅದಕ್ಕೆ ಯಾವ ರೀತಿ ಒಡಕು ಸೃಷ್ಟಿಸಬೇಕು ಎನ್ನುವುದರಲ್ಲಿ ಮಗ್ನರಾಗಿದ್ದಾರೆ. ಕರ್ನಾಟಕ ರಾಜ್ಯ ಎಲ್ಲ ಕ್ಷೇತ್ರಗಳಲ್ಲೂ ಗಮನಾರ್ಹ ಅಭಿವೃದ್ಧಿ ಸಾಧಿಸಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ನಮ್ಮ ಅಭಿವೃದ್ಧಿಯ ಬಗ್ಗೆ ಅಕ್ಕ ಪಕ್ಕದ ರಾಜ್ಯದವರು ಅಧ್ಯಯನ ಮಾಡುತ್ತಿದ್ದಾರೆ. ಈಗಾಗಲೇ ಬಜೆಟ್‍ನಲ್ಲಿ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಿಗೆ 42 ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸರ್ಕಾರದಿಂದ ಸಾಕಷ್ಟು ಅನುಕೂಲಗಳಾಗಿವೆ. ಬಡವರ ಬಳಿ ಹಣ ಚಲಾವಣೆಯಾಗಿ ಅವರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಇದಕ್ಕೆ ಹಲವು ನಿದರ್ಶನಗಳೂ ಇವೆ. ಇದೂ ಕೂಡ ಅಭಿವೃದ್ಧಿಯೇ, ಕಳೆದ ಒಂದು ತಿಂಗಳಲ್ಲಿ ನನ್ನ ಕ್ಷೇತ್ರದಲ್ಲಿಯೇ ಸುಮಾರು 25 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಇವೆಲ್ಲವೂ ಈ ರಾಜ್ಯದ ಅಭಿವೃದ್ಧಿಯ ಭಾಗಗಳು ಎಂದು ಹೇಳಿದರು.
ಸಚಿವ ಸ್ಥಾನದ ಆಕಾಂಕ್ಷಿ: ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಆದರೇ, ಅದಕ್ಕಿನ್ನೂ ಸಮಯ ಕೂಡಿ ಬಂದಿಲ್ಲ. ರಾಜ್ಯದಲ್ಲಿ ಮಂತ್ರಿಗಳ ಸ್ಥಾನ ಖಾಲಿ ಇಲ್ಲದ ಕಾರಣ ಈಗ ಅದರ ಚರ್ಚೆಯೂ ಅನಗತ್ಯ ಎಂದು ಸೇಠ್ ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್, ಸಿ.ಎನ್.ಮಂಜುನಾಥ್, ಉಪಾಧ್ಯಕ್ಷರಾದ ಶಹೇನ್‍ಷಾ ಅಹಮದ್, ಕೆಪಿಸಿಸಿ ಕೋ ಆರ್ಡಿನೇಟರ್ ಶೌಕತ್ ಅಲಿಖಾನ್, ಕಾಂಗ್ರೆಸ್ ಮುಖಂಡರಾದ ಸೈಯದ್ ಹಷ್ರತುಲ್ಲಾ, ಪ್ರದೀಪ್ ಚಂದ್ರ, ಶ್ರೀಧರ್, ಎಂ.ಎನ್.ಮಹದೇವು, ಸತ್ಯರಾಜು, ಅಣ್ಣಯ್ಯ, ಅಫ್ರೋಜ್ ಖಾನ್, ಶಿಫ್ಟನ್, ಪ್ರಮೋದ್, ಮೊಹಮ್ಮದ್ ಮುಮ್ತಾಜ್, ಸೈಯದ್ ಫಾರೂಖ್, ಕಮಲಮ್ಮ, ಉದಯಕುಮಾರ್, ಮೊಹಮ್ಮದ್ ರಫಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು