ಮೈಸೂರು : ಶೀಘ್ರದಲ್ಲೇ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ತನ್ವೀರ್ ಸೇಠ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ದೊರಕಲಿದೆ ಎಂದು ಶಾಸಕ ಕೆ.ಹರೀಶ್‍ಗೌಡ ಸುಳಿವು ನೀಡಿದರು.
ನಗರದ ರಿ-ಜೆಂಟಾ ಹೋಟೆಲ್‍ನಲ್ಲಿ ಭಾನುವಾರ ರಾತ್ರಿ ಅಝೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್ ನೇತೃತ್ವದಲ್ಲಿ ಶಾಸಕ ತನ್ವೀರ್ ಸೇಠ್ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಮುಖಂಡರುಗಳು ಏರ್ಪಡಿಸಿದ್ದ ಇಫ್ತಾರ್‍ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅನುಭವಿ ರಾಜಕಾರಣಿಗಳು, ಸೋಲಿಲ್ಲದ ಸರದಾರರೂ ಆದ ತನ್ವೀರ್ ಸೇಠ್ ಅವರಿಗೆ ಇದೇ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳಲ್ಲಿ ಸಚಿವ ಸ್ಥಾನ ಸಿಗುವ ಎಲ್ಲ ಸಾಧ್ಯತೆಗಳೂ ಇವೆ. ಈ ನಿಟ್ಟಿನಲ್ಲಿ ಅವರಿಗೆ ಸಚಿವ ಸ್ಥಾನ ಸಿಗುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ವಿಚಾರ ಎಂದು ಸಂತೋಷ ವ್ಯಕ್ತಪಡಿಸಿದರು.
ಪವಿತ್ರ ರಂಜಾನ್ ಹಬ್ಬವು ಮುಸ್ಲಿಮರಿಗೆ ಬದುಕಿನ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ. ದೇಹವನ್ನು ಹಸಿವಿಗೆ ಒಳಪಡಿಸಿ ಗೆಲ್ಲುವುದು. ಇದರಿಂದ ಹಸಿವಿಗೆ ಒಳಗಾಗುವ ಬಡವರ ಸಂಕಟಗಳನ್ನು ಅರ್ಥ ಮಾಡಿಕೊಳ್ಳುವುದು. ಉಪವಾಸ ಕೈಗೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಇದರೊಂದಿಗೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು. ಕೆಟ್ಟ ವಿಚಾರಗಳನ್ನು ಕೆಟ್ಟ ಕೆಲಸಗಳನ್ನು ಮಾಡದಿರುವುದು. ನಮ್ಮ ಸುತ್ತಮುತ್ತಲೂ ವಾಸಿಸುತ್ತಿರುವ ಎಲ್ಲರನ್ನೂ ಸಹೋದರತ್ವದ ಭಾವನೆಯಿಂದ ಕಾಣುವುದು. ಮಾನವೀಯ ಮೌಲ್ಯಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಸಾಗುವುದು ಇದರ ಪ್ರಧಾನ ತಿರುಳಾಗಿದೆ ಈ ಹಬ್ಬವು ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು.
ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ಮಾತನಾಡಿ, ಇಸ್ಲಾಂ ಧರ್ಮವು ಮುಖ್ಯವಾಗಿ ಐದು ಪ್ರಮುಖ ಮೂಲತತ್ವಗಳನ್ನು ಪ್ರತಿಪಾದಿಸುತ್ತದೆ. ಅವುಗಳೆಂದರೆ, ನಿರಾಕಾರನಾದ ಏಕದೇವನಲ್ಲಿ ಹಾಗೂ ಅವನ ಪ್ರವಾದಿಯಲ್ಲಿ ವಿಶ್ವಾಸವಿಡುವುದು. ದಿನದ ಐದು ಹೊತ್ತು ತಪ್ಪದೇ ನಮಾಜ್ ಮಾಡುವುದು. ಪ್ರತಿಯೊಬ್ಬ ವ್ಯಕ್ತಿ ತಾನು ವರ್ಷವಿಡೀ ದುಡಿದು ಗಳಿಸಿದ ಸ್ವತ್ತು, ಸಂಪತ್ತಿನಲ್ಲಿ ಶೇ 2.5ರಷ್ಟು ಮೊತ್ತವನ್ನು ಬಡವರಿಗೆ, ಸಾಲದಲ್ಲಿ ಮುಳುಗಿದವರಿಗೆ, ಅಸಹಾಯಕರಿಗೆ ದಾನ (ಝಕಾತ್) ಮಾಡುವುದು. ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಒಂದು ತಿಂಗಳು ಉಪವಾಸ (ರೋಜಾ) ಆಚರಿಸುವುದು ಮತ್ತು ಆರ್ಥಿಕವಾಗಿ ಅನುಕೂಲತೆಗಳಿದ್ದರೆ ಬದುಕಿನಲ್ಲಿ ಒಂದು ಸಲ ಹಜ್ ಯಾತ್ರೆಯನ್ನು ಕೈಗೊಳ್ಳುವುದು. ಇಸ್ಲಾಂ ಧರ್ಮದ ಪ್ರಮುಖ ಕರ್ತವ್ಯವಾಗಿದೆ. ಇದನ್ನು ತಪ್ಪದೆ ಪಾಲಿಸಿ ಎಂದು ಸಲಹೆ ನೀಡಿದರು.
ಆರ್ಚ್ ಬಿಷಪ್ ಮೋಸ್ಟ್ ರೆವರೆಂಡ್ ಬರ್ನಾಡ್ ಮೋರಸ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್, ಉಪಾಧ್ಯಕ್ಷ ಷಹೇನ್ ಷಾ ಅಹಮದ್, ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಕೆ.ಸಿ.ಶೌಕತ್ ಪಾಷ, ಬಷೀರ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಶಹಾಬುದ್ದೀನ್, ಕಾಂಗ್ರೆಸ್ ಮುಖಂಡರಾದ ಅಫ್ರೋಜ್ ಖಾನ್, ಸೈಯದ್ ಫಾರೂಖ್, ವಸೀಂ, ಶೌಕತ್ ಅಲಿ, ಶೀಪ್ಟನ್ ಮುಂತಾದವರು ಇದ್ದರು.
ಮೀನಾ ಬಜಾರ್‍ನಲ್ಲಿ ವ್ಯಾಪಾರಿಗಳಿಗೆ ಕಿರುಕುಳ ಬೇಡ:
ರಂಜಾನ್ ಹಬ್ಬದ ಮುಸಲ್ಮಾನ್ ಸಮುದಾಯದವರು ಹಗಲೆಲ್ಲಾ ಉಪವಾಸವಿದ್ದು, ರಾತ್ರಿ ಉಪವಾಸ ಬಿಡುತ್ತಾರೆ. ಹಗಲಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಅವರಿಗೆ ಹಬ್ಬದ ಖರೀದಿಗೆ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಖರೀದಿಗೆ ಬರಬೇಕಿದೆ. ಆದರೇ, ಮೀನಾ ಬಜಾರ್ ಬಟ್ಟೆ ಮಾರುಕಟ್ಟೆಯಲ್ಲಿ ಪೊಲೀಸರು ರಾತ್ರಿ 10 ಗಂಟೆ ನಂತರ ವ್ಯಾಪಾರಕ್ಕೆ ಅವಕಾಶಕೊಡುತ್ತಿಲ್ಲ ಎಂಬ ದೂರುಗಳು ಬಂದಿವೆ. ನಾನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ ನಂತರ 11 ಗಂಟೆ ತನಕ ಅವಕಾಶ ನೀಡಲಾಗಿದೆ. ಅದು ಸಾಕಾಗುವುದಿಲ್ಲ. ರಂಜಾನ್ ಹಬ್ಬ ಮುಗಿಯುವ ತನಕ ಕನಿಷ್ಠ ರಾತ್ರಿ 12 ಗಂಟೆ ವರೆಗೂ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಶಾಸಕ ತನ್ವೀರ್ ಸೇಠ್ ಅವರ ಜತೆಗೂಡಿ ಪೊಲೀಸ್ ಆಯುಕ್ತರೊಂದಿಗೆ ಮಾತನಾಡುತ್ತೇವೆ ಎಂದು ಹೇಳಿದರು.
• ಕೆ.ಹರೀಶ್‍ಗೌಡ, ಶಾಸಕರು
0 ಕಾಮೆಂಟ್‌ಗಳು