ನಕಲಿ ದಾಖಲೆ ಸೃಷ್ಟಿಸಿ ಮುಡಾ ನಿವೇಶನ ಕಬಳಿಕೆಗೆ ಯತ್ನ : ನಜರ್‌ಬಾದ್ ಪೊಲೀಸರಿಂದ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲು

 ಮೂಡಾ ನಿವೇಶನದ ಮೂಲ ಮಾಲೀಕ ಕೆ.ರಾಮಚಂದ್ರ ಅವರ ಜತೆ ಸ್ಥಳ ಮಹಜರು ನಡೆಸಿದ ಪೊಲಿಸರನ್ನು ಚಿತ್ರದಲ್ಲಿ ಕಾಣಬಹುದು

ಮೈಸೂರು : ನಕಲಿ ರೆವಿನ್ಯೂ ದಾಖಲೆ ಸೃಷ್ಟಿಸಿಕೊಂಡು ಲಕ್ಷಾಂತರ ರೂ ಬೆಲೆಬಾಳುವ ಮುಡಾ ಸೈಟನ್ನು ಕಬಳಿಸಿ ಅನಧಿಕೃತ ಕಟ್ಟಡ ನಿರ್ಮಿಸುತ್ತಿದ್ದ ಕ್ರಿಮಿನಲ್ ಹಿನ್ನಲೆಯುಳ್ಳ ಯಾಹ್ಯಾಖಾನ್ ಎಂಬ ವ್ಯಕ್ತಿ ವಿರುದ್ಧ ನಜರ್‍ಬಾದ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಕ್ಯಾತಮಾರನಹಳ್ಳಿ ಬಡಾವಣೆಯ ನಿವಾಸಿ ಯಾಹ್ಯಾಖಾನ್  ಕೆ.ರಾಮಚಂದ್ರ ಎಂಬವರಿಗೆ ಸೇರಿದ 600 ಚದರ ಅಡಿ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿಕೊಂಡು ಅವರಿಗೆ ಬೆದರಿಸಿ ಸೈಟನ್ನು ಕಬಳಿಸಿ ಅಲ್ಲಿ ಎರಡು ಅಂತಸ್ತಿನ ಮನೆಯನ್ನು ನಿರ್ಮಿಸುತ್ತಿದ್ದಾನೆ. 

ಏನಿದು ಹಿನ್ನಲೆ :

ಕ್ಯಾತಮಾರನಹಳ್ಳಿ ಬಡಾವಣೆಯಲ್ಲಿರುವ ನಿವೇಶನ ಸಂಖ್ಯೆ ಓ.ವೈ.ಹೆಚ್.ಎಸ್-ಇಡಬ್ಲ್ಯೂಎಸ್ ನಂ. 1565, 6.00*9.00 ಮೀಟರ್ ಅಳತೆಯ ಇಡಬ್ಲ್ಯೂಎಸ್ ಮನೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸೈಯದ್ ಮನ್ಸೂರ್ ಅಹಮ್ಮದ್ ಎಂಬವರಿಗೆ ಮಂಜೂರಾಗಿತ್ತು. 

ಈ ಮನೆಯನ್ನು ದಿನಾಂಕ: 21.04.2021 ರಂದು ಕೆ.ರಾಮಚಂದ್ರ ಎಂಬವರು ತಮ್ಮ ಹೆಸರಿಗೆ ಕ್ರಯ ಮಾಡಿಸಿಕೊಂಡಿದ್ದರು. ನಂತರ ಮುಡಾದಲ್ಲಿ ಖಾತೆಯೂ ಆಗಿದೆ. ಹಳೆ ಮನೆಯನ್ನು ಒಡೆಸಿ ಹೊಸ ಮನೆಯನ್ನು ಕಟ್ಟುವ ತಯಾರಿಯಲ್ಲಿದ್ದ ಕಾರಣ ಕೆಲವು ದಿನಗಳ ಕಾಲ ರಾಮಚಂದ್ರ ತಮ್ಮ ಸೈಟಿನ ಬಳಿ ಹೋಗಿರಲಿಲ್ಲ

ಈ ಸಮಯವನ್ನೆ ಬಳಸಿಕೊಂಡ ಇದೇ ಸೈಟಿನ ಬಾಜುವಿನಲ್ಲಿ ವಾಸವಿದ್ದ ಯಾಹ್ಯಾಖಾನ್ ಎಂಬ ವ್ಯಕ್ತಿ ತಾವು ಈ ಸೈಟನ್ನು ಬೇರೆಯವರಿಂದ ಖರೀದಿ ಮಾಡಿಕೊಂಡಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಯಾವುದೇ ಲೈಸೆನ್ಸ್ ಪಡೆಯದೆ ಏಕಾಏಕಿ ಈ ನಿವೇಶನದಲ್ಲಿ ಎರಡು ಅಂತಸ್ತಿನ ಮನೆ ನಿರ್ಮಿಸಿದ್ದನು. 

ಈ ವಿಷಯ ರಾಮಚಂದ್ರ ಅವರಿಗೆ ಗೊತ್ತಾಗಿ ಸೈಟಿನ ಬಳಿ ಬಂದಾಗ ಇದೇ ಯಾಹ್ಯಾಖಾನ್ ಇದು ರೆವಿನ್ಯೂ ಸೈಟ್ ನನ್ನ ಮನೆ ಎಂದು ರಾಮಚಂದ್ರ ಅವರಿಗೆ ಧಮಕಿ ಹಾಕಿ ಕಳಿಸಿದ್ದನು.

ನಂತರ ರಾಮಚಂದ್ರ ಈತನ ವಿರುದ್ಧ ನಜರ್‍ಬಾದ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರನ್ನು ಪಡೆದ ಪೊಲೀಸರು ಶನಿವಾರ ಯಾಹ್ಯಾಖಾನ್ ವಿರುದ್ಧ ಎಫ್‍ಐಆರ್ ದಾಖಲಿಸಿ, ಸ್ಥಳ ಮಹಜರು ನಡೆಸಿದ್ದಾರೆ.

ಯಾಹ್ಯಾಖಾನ್ ಇದೇ ರೀತಿ ಖಾಲಿ ನಿವೇಶನಗಳಲ್ಲಿ ಅಕ್ರಮವಾಗಿ ಶೇಡ್ ನಿರ್ಮಿಸಿಕೊಂಡು ನಂತರ ಮಾಲಿಕರು ಬಂದಾಗ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಕೆಲವರು ಮಾಹಿತಿ ನೀಡಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು