ಬಜೆಟ್‍ನಲ್ಲಿ ದಲಿತರು, ಮುಸಲ್ಮಾನರ ಬೆನ್ನಿಗೆ ಚೂರಿ ಹಾಕಿದ ಸಿದ್ದರಾಮಯ್ಯ : ಮುಸಲ್ಮಾನರಿಗೆ ಶೇ. 1ರಷ್ಟೂ ಹಣ ನೀಡಿಲ್ಲ : ಎಂ.ಕೃಷ್ಣಮೂರ್ತಿ ಆರೋಪ


 ಮೈಸೂರು : ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್, ದಲಿತರು ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಸವರಿ, ಬೆನ್ನಿಗೆ ಚೂರಿ ಹಾಕಿರುವ ಬಜೆಟ್ ಆಗಿದೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷರಾದ ಎಂ.ಕೃಷ್ಣಮೂರ್ತಿ ಟೀಕಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 

ಎರಡನೇ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಎಸ್‍ಸಿ, ಎಸ್‍ಟಿ, ಮತ್ತು ಮುಸಲ್ಮಾನರು ಶೇ90 ಕ್ಕಿಂತ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಕಾರಣಕ್ಕಾಗಿ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ನೀಡಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಬೊಗಳೆ ಬಿಡುತ್ತಿದ್ದಾರೆ.

ವಾಸ್ತವದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್‍ನಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.

ಎಸ್ಪಿ ಎಸ್ಪಿ, ಟಿಎಸ್‍ಪಿ ಯೋಜನೆಗೆ ಈ ಬಾರಿ 42 ಸಾವಿರ ಕೋಟಿ  ಹಣ ಇಟ್ಟಿರುವುದಾಗಿ ಸಿಎಂ ಸೇರಿದಂತೆ ವಿರೋಧ ಪಕ್ಷಗಳು ತಮಟೆ ಬಾರಿಸಿ ಹೇಳಿದ್ದರೂ ಈ ಕಾಯ್ದೆಯ ನಿಯಮ 7(ಸಿ) ಅನ್ವಯ ಸುಮಾರು 

23 ಸಾವಿರ ಕೋಟಿ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಎಂದು ವರ್ಗಾಯಿಸಿಕೊಂಡು ದ್ರೋಹ ಎಸಗಲಾಗಿದೆ. ಜತೆಗೆ 13 ಸಾವಿರ ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ. ಉಳಿದ 6 ರಿಂದ 7 ಸಾವಿರ ಕೋಟಿ ಹಣವನ್ನು ಎಸ್‍ಸಿ, ಎಸ್‍ಟಿ ಸಮುದಾಯದ ಉದ್ಯೋಗ ಸೃಷ್ಟಿ, ಸ್ವಾವಲಂಬಿ ಬದುಕಿನ ನಿರ್ಮಾಣಕ್ಕೆ ಬಳಸಿಕೊಳ್ಳದೆ ವಂಚಿಸಲಾಗುತ್ತಿದೆ ಎಂದು ದೂರಿದರು.

ಗ್ಯಾರಂಟಿ ಯೋಜನೆಗಳು ಎಲ್ಲ ಸಮುದಾಯಕ್ಕೂ ಸೇರಿದ ಸಾಮಾನ್ಯ ಯೋಜನೆಯಾಗಿದ್ದು, ಇದಕ್ಕಾಗಿ ಎಸ್‍ಸಿ ಎಸ್‍ಪಿ ಟಿಎಸ್‍ಪಿ ಹಣವನ್ನು ಬಳಸುವುದು ಅಕ್ಷಮ್ಯ ಅಪರಾಧ ಮತ್ತು ದಲಿತರಿಗೆ ಮಾಡಿದ ದ್ರೋಹ ಎಂದು ಕೃಷ್ಣಮೂರ್ತಿ ಕಿಡಿ ಕಾರಿದರು.

ಇನ್ನು ವಿವಿಧ 8 ಎಸ್‍ಸಿ ಎಸ್‍ಟಿ ಅಭಿವೃದ್ಧಿ ನಿಗಮಗಳಿಗೆ ಕೇವಲ 488 ಕೋಟಿ ರೂಪಾಯಿಗಳನ್ನು ಮಾತ್ರ ನೀಡಿದ್ದಾರೆ.ಇದೂ ಸಹ ಅನ್ಯಾಯ ಎಂದರು.

ಈ ವರ್ಷವೂ ಸಹ 26 ಹೋಬಳಿಗಳಲ್ಲಿ ಎಸ್ಸಿ ಎಸ್ಟಿಗಳಿಗೆ ವಸತಿ ಶಾಲೆಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಲಾಗಿದೆ.ದುರಂತವೆಂದರೆ ರಾಜ್ಯದಲ್ಲಿ ಈಗಾಗಲೇ ಹತ್ತಾರು ವರ್ಷಗಳಿಂದ ಪ್ರಾರಂಭವಾಗಿರುವ ಮುರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಆದರ್ಶ ವಿದ್ಯಾಲಯಗಳಿಗೆ ಇನ್ನೂ ಖಾಯಂ ಶಿಕ್ಷಕರನ್ನೇ ನೇಮಕ ಮಾಡದೆ 90% ಅತಿಥಿ ಶಿಕ್ಷಕರು ಮತ್ತು ಗುತ್ತಿಗೆ ಆಧಾರಿತ ನೌಕರರಿಂದ ವಸತಿ ಶಿಕ್ಷಣ ಶಾಲೆಗಳನ್ನು ನಡೆಸಲಾಗುತ್ತಿದೆ ಇದರಿಂದ ಈ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕುಸಿತವಾಗಿವೆ. 

ಕಟ್ಟಡ ಕಟ್ಟುವುದರಿಂದ ಕಮಿಷನ್ ದೊರೆಯುತ್ತದೆ. ಆದರೆ ಖಾಯಂ ನೇಮಕಾತಿ ನಡೆದರೆ ಯಾವುದೇ ಲಾಭವಿಲ್ಲ ಎಂದು ಖಾಯಂ ಶಿಕ್ಷಕರು ಮತ್ತು ನೌಕರರನ್ನು ನೇಮಿಸದೆ ಈ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 2.70 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೀಡಿದ್ದ ಭರವಸೆಯನ್ನೇ ಅವರು ಮರೆತಿದ್ದಾರೆ. ಇದು ರಾಜ್ಯದ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.

ಇನ್ನು ಅಲ್ಪಸಂಖ್ಯಾತರ ಜನಸಂಖ್ಯೆ ಶೇಕಡ 15ಕ್ಕಿಂತ ಹೆಚ್ಚಿದ್ದರೂ ಬಜೆಟ್ ನಲ್ಲಿ ಅವರು ಕೇವಲ ಶೇ. 1 ಕ್ಕಿಂತ ಕಡಿಮೆ ಅನುದಾನ ನೀಡಲಾಗಿದೆ. ಆದರೂ ಇದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ಹಾಸ್ಯಾಸ್ಪದ. ಬಿಜೆಪಿ ಇದನ್ನು ಹಲಾಲ್ ಬಜೆಟ್, ಪಾಕಿಸ್ತಾನ ಬಜೆಟ್, ಜಮೀರ್ ಅಹಮದ್ ಖಾನ್ ಬಜೆಟ್ ಎಂದು ಟೀಕಿಸುತ್ತಿರುವುದು ನಾಚಿಕೆಗೇಡು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರಶೇಖರ್, ಬಸವಣ್ಣ, ಬಿ.ಮಹದೇವಸ್ವಾಮಿ. ಪ್ರಭಾಕರ್ ಇತರರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು