ಕನ್ನಡಪರ ಹೋರಾಟಗಾರರು, ಸಂಘಟನೆಗಳಿಂದ ನಮ್ಮ ಭಾಷೆ, ಸಂಸ್ಕೃತಿ ಉಳಿದಿದೆ: ಡಾ.ರೇಖಾ ಮನಃಶಾಂತಿ


 ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರಂತರವಾಗಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಖ್ಯಾತ ಮನೋ ವಿಜ್ಞಾನಿ, ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಸಂಸ್ಥಾಪಕ ಗೌರವಾಧ್ಯಕ್ಷೆ ಡಾ.ರೇಖಾ ಮನಃಶಾಂತಿ ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಪುರಭವನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಡ್ಯಾನ್ಸ್, ಕರೋಕೆ, ಫ್ಯಾಷನ್ ಷೋ ಮತ್ತು ಉಚಿತ ಕಣ್ಣಿನ ತಪಾಸಣೆ, ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ನಾಡಿನ ಕನ್ನಡಪರ ಹೋರಾಟಗಾರರು ಮತ್ತು ಸಂಘಟನೆಗಳ ಪಾತ್ರ ದೊಡ್ಡದು, ಮಕ್ಕಳಲ್ಲಿ ಚಿಕ್ಕಂದಿನಿಂದಲೇ ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಕಲಿಸುವುದು ಅಗತ್ಯವಾಗಿದ್ದು, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಡಾ.ಕಸ್ತೂರಿ ಶಂಕರ್ ಅವರಂತಹ ಹೋರಾಟಗಾರರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ನಮ್ಮೆಲ್ಲರ ಬೆಂಬಲ ನೀಡುವುದು ಅಗತ್ಯವಾಗಿದೆ ಎಂದರು.

ಚಿತ್ರನಟ ಜಯಪ್ರಕಾಶ್ ಅವರು ಮಾತನಾಡಿ, ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ನಿರಂತರವಾಗಿ ಜನಸೇವೆ ಮಾಡುತ್ತಿದೆ. ಇಂದು ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಯ ಜತೆಗೆ ವೃದ್ಧರಿಗೆ ಕಣ್ಣು ತಪಾಸಣೆ, ಉಚಿತಕನ್ನಡಕ ವಿತರಣೆ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದರು. 

ಮೇಲುಕೋಟೆ ವಂಗೀಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದು, ಸಮಾಜ ಸೇವಕರಾದ ಕೆ.ರಘುರಾಮ್ ವಾಜಪೇಯಿ ಅವರು ಸಮಾರಂಭವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಡ್ಯಾನ್ಸ್ ಮಾಡಿದರಲ್ಲದೇ, ವಿವಿಧ ಕಲಾವಿದರು ಕರೋಕೆ ಕಾರ್ಯಕ್ರಮ ನಡೆಸಿಕೊಟ್ಟರು. ಅಲ್ಲದೇ ಫ್ಯಾಷನ್ ಷೋ ಕಾರ್ಯಕ್ರಮವೂ ನಡೆಯಿತು.

ಮಕ್ಕಳು ಉತ್ಸಾಹದಿಂದ ಎಲ್ಲ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪೋಷಕರು, ಆಯೋಜಕರು ಮತ್ತು ಸಭಿಕರ ಗಮನಸೆಳೆದರು.

ಇದೇ ಸಂದರ್ಭದಲ್ಲಿ ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣು ತಪಾಸಣಿ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮವೂ ನಡೆಯಿತು.

ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾಧ್ಯಕ್ಷರಾದ ಡಾ,ನಯನ ಹರಿಶ್ಚಂದ್ರ, ಮೈಸೂರು ನಗರಾಧ್ಯಕ್ಷರಾದ ಡಾ.ಮೌಲ್ಯ ಜೈಕುಮಾರ್, ಗಿರಿಧರ್, ಹಾಸನ ಜಿಲ್ಲಾಧ್ಯಕ್ಷರಾದ ಪಾರ್ವತಿ, ಹುಬ್ಬಳ್ಳಿ ಧಾರಾವಾಡ ಜಿಲ್ಲಾಧ್ಯಕ್ಷರಾದ ಡಾ.ಜಿ.ಪ್ರೇಮಾ, ಮೈಸೂರು ಜಿಲ್ಲಾಧ್ಯಕ್ಷರಾದ ಅಮಿನಾಬೇಗಂ, ಡಾ.ನಟರಾಜ್ ಹೆಚ್.ಪಿ., ಸಂಸ್ಥಾಪಕ ಕಾರ್ಯದರ್ಶಿ ಡಾ.ತೇಜಸ್ ಪೃಥ್ವಿರಾಜ್, 

ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷರಾದ ವಿಜಯಲಕ್ಷ್ಮಿ ಅರಸ್, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಡಾ. ಸಂದೀಪ್ ಪಾಂಡೆ, ಲಯನ್ ಡಾ.ಎಸ್. ವೆಂಕಟೇಶ್, ಡಾ. ಸೀತಾರಾಮೇಗೌಡ, 

ಹರೇ ಶ್ರೀನಿವಾಸ ಸಮಿತಿ ಅಧ್ಯಕ್ಷರಾದ ಡಾ.ಗುಂಡೂ ವೆಂಕಟೇಶ್, ಸಂಸ್ಥಾಪಕರಾದ ಡಾ.ಕಸ್ತೂರಿಚಂದ್ರು ಮುಂತಾದವರು ಭಾಗವಹಿಸಿದ್ದರು. 

ಸಾಧಕರಿಗೆ ಕರ್ನಾಟಕ ಕೇಸರಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜೆಪಿ ಜತೆ ಅಭಿಮಾನಿಗಳ ಡ್ಯಾನ್ಸ್ 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಗೀರಥ ಚಿತ್ರದ ನಾಯಕ ನಟ ಜಯಪ್ರಕಾಶ್(ಜೆಪಿ) ಅವರನ್ನು ನೋಡುತ್ತಲೇ ಅಭಿಮಾನಿಗಳು ಹುಚ್ಚೆದ್ದು ಕುಣಿದರಲ್ಲದೇ, ಜೆಪಿ ಅವರೊಂದಿಗೆ ಅವರದೇ ಚಿತ್ರದಹಾಡಿಗೆ ಹೆಜ್ಜೆ ಹಾಕಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು