ಶೀಘ್ರದಲ್ಲೇ ಕಾವೇರಿ ನಗರಕ್ಕೆ ಬಸ್ ಸೌಲಭ್ಯ: ಶಾಸಕ ತನ್ವೀರ್ ಸೇಠ್ ಭರವಸೆ, ಕಾವೇರಿ ನಗರ ಕ್ಷೇಮಾಭಿವೃದ್ಧಿ ಸಮಿತಿ, ಕನ್ನಡ ರಾಜ್ಯೋತ್ಸವ ಉದ್ಘಾಟನೆ

 

ಮೈಸೂರು : ಸಾರ್ವಜನಿಕರು, ಮಹಿಳೆಯರು, ಅಂಗವಿಕಲರು ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ತೀವ್ರ ಅನಾನುಕೂಲವಾಗಿರುವ ಕಾವೇರಿ ನಗರಕ್ಕೆ ಶೀಘ್ರದಲ್ಲೇ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ತನ್ವೀರ್ ಸೇಠ್ ಭರವಸೆ ನೀಡಿದರು.

ಕಾವೇರಿನಗದಲ್ಲಿ ಶನಿವಾರ ಮದ್ಯಾಹ್ನ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾವೇರಿ ನಗರ ಕ್ಷೇಮಾಭಿವೃದ್ಧಿ ಸಮಿತಿಯ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಸಮಿತಿಯನ್ನು ಉದ್ಘಾಟಿಸಿ ಹಾಗೂ ಕನ್ನಡ ದ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾವೇರಿನಗರದಲ್ಲಿ ಸಾಕಷ್ಟು ಸಮಸ್ಯೆ ಇದೆ. ಸರ್ಕಾರದಿಂದ ಅಕ್ರಮ ಸಕ್ರಮ ಆದೇಶ ಬಂದಾಗ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕುತ್ತದೆ. ಬಡಾವಣೆಯಲ್ಲಿ ಈಗಾಗಲೇ ಕುಡಿಯುವ ನೀರು, ರಸ್ತೆ, ಒಳಚರಂಡಿ, ವಿದ್ಯುತ್ ದೀಪ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಇದೀಗ ಕಾವೇರಿನಗರ ಕ್ಷೇಮಾಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಮಿತಿ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಶಾಶ್ವತ ಪರಿಹಾರಕಲ್ಪಿಸಲಾಗುವುದು ಎಂದು ಹೇಳಿದರು.

ಸಮಿತಿ ಪದಾಧಿಕಾರಿಗಳೂ ಸಹ ಜವಾಬ್ದಾರಿಯಿಂದ ಬಡಾವಣೆಯ ಅಭಿವೃದ್ಧಿ ಬಗ್ಗೆ ಕಾಳಜಿಯಿಂದ ಕೆಲಸ ಮಾಡಬೇಕು. ನನ್ನಿಂದ ಆಗುವ ಎಲ್ಲಕೆಲಸಗಳನ್ನೂ ಸಹ ಆದ್ಯತೆಯ ಮೇರೆಗೆ ಮಾಡಿಕೊಡುತ್ತೇನೆ ಎಂದರು.

ಬಡಾವಣೆ ನಿವಾಸಿಗಳು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆ ಮೌಲ್ಯಗಳನ್ನು ಹೇಳಿಕೊಡಬೇಕು. ಸಮಾಜದಲ್ಲಿ ಇಂದು ಮೌಲ್ಯಗಳ ಕೊರತೆ ಹೆಚ್ಚಾಗಿದೆ. ಅದನ್ನು ಸರಿದೂಗಿಸುವ ಜವಾಬ್ದಾರಿಯೂ ಪೋಷಕರ ಮೇಲಿದೆ ಎಂದು ಸಲಹೆ ನೀಡಿದರು.

ಕಾವೇರಿನಗರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಪುಟ್ಟಸ್ವಾಮಿ ಮಾತನಾಡಿ, ಬಡಾವಣೆಯ ಎಲ್ಲ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ನಿಟ್ಟಿನಲ್ಲಿ ಅವರು ನಮಗೆ ಅಗತ್ಯ ನೆರವು ನೀಡುವ ಬಗ್ಗೆ ನಮಗೆ ನಂಬಿಕೆ ಇದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಡಾವಣೆಯ ಪ್ರವೇಶದ್ವಾರದಲ್ಲಿ ಶಾಸಕರು ನಾಮಫಲಕ ಅನಾವರಣ ಮಾಡಿದರು. ಬಳಿಕ ವಾದ್ಯಗಳ ಮೂಲಕ ಶಾಸಕರನ್ನು ಮೆರವಣಿಯಲ್ಲಿ ವೇದಿಕೆಗೆ ಕರೆತರಲಾಯಿತು. ಬಡಾವಣೆಯ ಚಾಮುಂಡೇಶ್ವರಿ ದೇವಾಲಯದಲ್ಲಿ ಶಾಸಕರು ಪೂಜೆ ಸಲ್ಲಿಸಿದ ಬಳಿಕ ಕನ್ನಡ ದ್ವಜಾರೋಹಣ ನೆರವೇರಿಸಿದರು. ಬಳಿಕ ವೇದಿಕೆಯಲ್ಲಿ ಬಡಾವಣೆಯ ಅಭಿವೃದ್ಧಿಗೆ ದುಡಿದು ಇತ್ತೀಚೆಗೆ ನಿಧನರಾದ ಲಕ್ಷ್ಮಣ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೇದಿಕೆ ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಶಾಸಕ ತನ್ವೀರ್ ಸೇಠ್ ಅವರಿಗೆ ಪ್ರಿಯವಾದ ಹಿಂದಿ ಗಾಯಕ ಮಹಮ್ಮದ್ ರಫಿ ಕನ್ನಡದಲ್ಲಿ ಹಾಡಿರುವ ನೀ..ನೆಲ್ಲಿ..ನಡೆವೆ ದೂರ ಎಲ್ಲೆಲ್ಲೂ ಲೋಕವೇ..ಈ ಲೋಕವೆಲ್ಲಾ..ಘೋರ ..ಎಲ್ಲೆಲ್ಲೂ ಶೋಕವೇ.. ಎಂಬ ಹಾಡನ್ನು ಕಾವೇರಿನಗರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷರೂ ಹಾಗೂ ಹೆಸರಾಂತ ಗಾಯಕರೂ ಆದ ಪುಟ್ಟಸ್ವಾಮಿ ಸುಶ್ರಾವ್ಯವಾಗಿ ಹಾಡಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿದರು.

ಕಾರ್ಯಕ್ರಮದಲ್ಲಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಎಕ್ಬಾಲ್, ಕಾವೇರಿನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಪ್ಪು, ಹಾರೂನ್ ರಶೀದ್, ನಗರಪಾಲಿಕೆ ಮಾಜಿ ಸದಸ್ಯರಾದ ಅಕ್ಮಲ್ ಪಾಷ, ಮುಖಂಡರಾದ ಪುಷ್ಪಲತಾ ಲಕ್ಷ್ಮಣ್, ಜಗದೀಶ್, ಕೃಷ್ಣಪ್ಪ, ಮನೋಹರ್, ದಿನೇಶ್, ನಾರಾಯಣ್ ಮುಂತಾದವರು ಉಪಾಧ್ಯಕ್ಷರಾದ ಎಂ.ಕೆ.ಬಸವರಾಜು, ಪ್ರಧಾನ ಕಾರ್ಯದರ್ಶಿ ಡಾ.ವೀರಭದ್ರಸ್ವಾಮಿ, ಸಹ ಕಾರ್ಯದರ್ಶಿ ರಾಜು ಜಿ.ಎಸ್., ಸಂಘಟನಾ ಕಾರ್ಯದರ್ಶಿ ಬಸವರಾಜು, ಸಂಚಾಲಕರಾದ ಸೋಮಶೇಖರ್, ನಿರ್ದೇಶಕರಾದ ಕೃಷ್ಣಪ್ಪ ಪಿ, ಹೆಚ್. ದೇವೇಂದ್ರ, ಕೃಷ್ಣಮೂರ್ತಿ, ಜಿ.ದೀನದಯಾಳ್, ಬಿ.ಪ್ರಕಾಶ್, ಪುಟ್ಟಸ್ವಾಮಿ, ನಾಗರಾಜು ಕೆ., ರಾಜು ಎ.ಎನ್., ರಘು ಸಿ.ಪಿ., ಗೌರವ ಸಲಹೆಗಾರರಾದ ಮನೋಹರ್ ಜೆ., ಬಂಡಿ ಎಸ್.ಡಿ ಇದ್ದರು.

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು