ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳಿಗೆ ದಕ್ಕದ ಸ್ವಾತಂತ್ರ್ಯ
ಎಸ್‌ಡಿಪಿಐ ರಾಜ್ಯ ಪ್ರತಿನಿಧಿ ಸಭೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ವಿ.ಎಸ್.ಕಾಂಬ್ಳೆ ಆತಂಕ
ಮೈಸೂರು : ಭಾರತ ಜಗತ್ತಿನಲ್ಲೇ ಸರ್ವ ಶ್ರೇಷ್ಠ ಸಂವಿಧಾನ ಹೊಂದಿದೆಯಾದರೂ ಇಲ್ಲಿನ ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳಿಗೆ ಇನ್ನೂ ಕೂಡ ಸ್ವಾತಂತ್ರ್ಯ ದೊರಕಿಲ್ಲ. ಕ್ಷಣ ಕ್ಷಣವೂ ಭಯದ ನೆರಳಲ್ಲೇ ಅವರು ಬದುಕುವಂತಾಗಿದೆ. ಇದು ಹೀಗೆ ಮುಂದುವರಿದರೆ ವರ್ತಮಾನ ಮತ್ತಷ್ಟು ಭಯಂಕರವಾಗಲಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷರಾದ ವಿ.ಎಸ್.ಕಾಂಬ್ಳೆ ಆತಂಕ ವ್ಯಕ್ತಪಡಿಸಿದರು.
ಮೈಸೂರಿನ ಮಣಿಪಾಲ್ ಆಸ್ಪತ್ರೆ ಹಿಂಬಾಗದಲ್ಲಿರುವ ವೈಟ್ ಪ್ಯಾಲೇಸ್ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವರು ಏರ್ಪಡಿಸಿದ್ದ ಕರ್ನಾಟಕ ರಾಜ್ಯದ ೬ನೇ ರಾಜ್ಯ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಆಳ್ವಿಕೆಯಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನಿರಾಕರಿಸಲಾಗಿತ್ತು. ಸ್ವಾತಂತ್ರ್ಯನಂತರ ನಮ್ಮ ಸಂವಿಧಾನ ಜಾರಿಯಾಗುತ್ತಿದ್ದಂತೆ ಮಹಿಳೆಯರಿಗೆ ಮತದಾನದ ಹಕ್ಕು ನೀಡುವುದರ ಜೊತೆಗೆ ಯಾವುದೇ ಧರ್ಮ, ಜಾತಿ, ಪಂಗಡ ಆರ್ಥಿಕ ಸ್ಥಿತಿಗತಿಗಳ ತಾರತಮ್ಯವಿಲ್ಲದೇ ಎಲ್ಲರಿಗೂ ಸಮಾನವಾದ ಹಕ್ಕು ನೀಡಲಾಗಿದೆ. ಇದರಿಂದ ನಮ್ಮ ದೇಶದ ಸಂವಿಧಾನ ಪ್ರಪಂಚದ ಯಾವುದೇ ದೇಶದ ಸಂವಿಧಾನಕ್ಕಿಂತ ಸರ್ವ ಶ್ರೇಷ್ಟವಾದುದು. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಭಾರತ ದೇಶದ ಎಲ್ಲಾ ಪ್ರಜೆಗಳಿಗೂ ಸಾಮಾಜಿಕ ಆರ್ಥಿಕ ರಾಜಕೀಯ ನ್ಯಾಯ ಸಮಾನತೆಯನ್ನು ತಿಳಿಸಲಾಗಿದೆ. ಆಲ್ಲದೇ ಅಬಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ಯ್ಯ ನೀಡಲಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿ ಸಮುದಾಯ ಸೇರಿದಂತೆ ಅಶಕ್ತರಿಗೆ ಸ್ವಾತಂತ್ರ್ಯ, ಸಮಾನತೆ ಸಿಗುತ್ತಿಲ್ಲ. ಇದಕ್ಕೆ ನಮ್ಮ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಕಾರಣವಾಗಿದೆ. ಈ ನಿಟ್ಟಿನಲ್ಲಿ ಎಸ್‌ಡಿಪಿಐ ಸಮಾನತೆ, ಸ್ವಾತಂತ್ರ್ಯ, ಮತ್ತು ಭಯಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ ಎಂದರು.
ಸ್ವಾಂತಂತ್ರ್ಯ ಪೂರ್ವದಲ್ಲಿ ಕಾನೂನು ರಚಿಸುವ ಮತ್ತು ಅದನ್ನು ನಿರಾಕರಿಸುವ ಅಧಿಕಾರ ಬ್ರಿಟಿಷರಿಗೆ ಇತ್ತು, ಆದರೆ ನಮ್ಮ ದೇಶದಲ್ಲಿ ಸಂವಿಧಾನ ಜಾರಿಯಾದ ಬಳಿಕ ಅದನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಆದರೆ ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ದಲಿತರಿಗೆ ಅವರ ಹಕ್ಕುಗಳನ್ನು ನಿರಾಕರಣೆ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸುವ ಧೈರ್ಯ ಆಶಕ್ತ ಸಮುದಾಯಕ್ಕೆ ಇಲ್ಲ. ಸಂವಿದಾನ ಎಲ್ಲ ಹಕ್ಕುಗಳನ್ನು ನೀಡಿದ್ದರೂ ಇಂದಿಗೂ ತುಳಿತಕ್ಕೆ ಒಳಗಾದ ಸಮುದಾಯದವರು ಭಯದಿಂದಲೇ ಬದುಕುತ್ತಿದ್ದಾರೆ. ಎಸ್‌ಡಿಪಿಐ ಅಶಕ್ತ ಸಮುದಾಯದ ಹಕ್ಕುಗಳನ್ನು ಅವರಿಗೆ ಕೊಡಿಸಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಪ್ರಾಣ ತೆತ್ತ ಮುಸಲ್ಮಾನರು, ದಲಿತರು, ಆದಿವಾಸಿಗಳು ಮತ್ತು ಅನೇಕ ಹಿಂದುಳಿದ ವರ್ಗದ ಹೋರಾಟಗಾರರ ಹೆಸರನ್ನು ಕಡೆಗಣಿಸಲಾಗಿದೆ. ಆದರೆ, ಹೋರಾಟದಲ್ಲಿ ಭಾಗವಹಿಸದ ಹಲವಾರು ಮೇಲ್ವರ್ಗದ ಜನರು ದೇಶದ ಆಡಳಿತ ಚುಕ್ಕಾಣಿ ಹಿಡಿದಿದು ಆಡಳಿತ ನಡೆಸುತ್ತಿರುವುದು ದುರ್ದೈವ ಎಂದರು.
ದೇಶದಲ್ಲಿ ಧರ್ಮ, ಜಾತಿ, ಭಾಷೆ, ಹೆಸರಲ್ಲಿ ಜನರ ಮಧ್ಯೆ ವಿಷವನ್ನು ಬಿತ್ತುವುದರ ಮೂಲಕ ಬಿಜೆಪಿ, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಪಕ್ಷ ಇದರ ಹೊರತಾಗಿಲ್ಲ, ದೇಶವನ್ನು ಒಗ್ಗೂಡಿಸವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ದಲಿತರು ಅಲ್ಪಸಂಖ್ಯಾತರನ್ನು ಹತ್ಯೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಸಮಾನತೆ ಕಾಣಲಾಗುತ್ತಿಲ್ಲ, ವರ್ತಮಾನವು ಮತ್ತಷ್ಟು ಭಯಂಕರವಾಗಿದ್ದು ನಮ್ಮ ರಾಜಕೀಯ ಪಕ್ಷಗಳ ಆಯ್ಕೆಯನ್ನು ನಾವು ಬದಲಾಯಿಸಿಕೊಳ್ಳುವುದರ ಬಗ್ಗೆ ಮರುಚಿಂತನೆ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಅದ್ದೂರಿಯಾಗಿ ಪ್ರಾರಂಭವಾದ ಕಾರ್ಯಕ್ರಮ:
ಎಸ್‌ಡಿಪಿಐ ೬ನೇ ರಾಜ್ಯ ಪ್ರತಿನಿಧಿಗಳ ಸಭೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಬೆಳಿಗ್ಗೆ ಹತ್ತು ಗಂಟೆಗೆ ಸಭಾಂಗಣದ ಆವರಣದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಧ್ವಜರೋಹಣ ನೇರವೇರಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷರಾದ ವಿ. ಎಸ್. ಕಾಂಬ್ಳೆ ಉದ್ಘಾಟಿಸಿದರು. ವೇದಿಕೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್,
ರಾಜ್ಯ ಉಸ್ತುವಾರಿ ಅಬ್ದುಲ್ ಮಜೀದ್ ಫೈಜಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಮಹಮ್ಮದ್, ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸೊ ಫ್ರಾಂಕೋ, ರಾಜ್ಯ ಘಟಕದ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವು ರಾಷ್ಟ್ರೀಯ ಮುಖಂಡರು ವಿಷಯಗಳನ್ನು ಮಂಡಿಸಿದರು.
ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಫತ್ ಖಾನ್, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಜಿಲ್ಲಾ ಘಟಕದ ಕಾರ್ಯದರ್ಶಿ ಫರ್ದೀನ್, ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್. ಸ್ವಾಮಿ ಸೇರಿದಂತೆ ಹಲವರು ಇದ್ದರು.
0 ಕಾಮೆಂಟ್‌ಗಳು