ಮೈಸೂರು : ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮೂರರಲ್ಲೂ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಡಳಿತಕ್ಕೆ ಸಿಕ್ಕಿರುವ ಜನಮನ್ನಣೆ ಎಂದು ಹಿರಿಯ ವಕೀಲರಾದ ಪುಟ್ಟಸಿದ್ದೇಗೌಡ ಬಣ್ಣಿಸಿದ್ದಾರೆ.
ಶನಿವಾರ ಸಂಜೆ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಮೂರು ಕ್ಷೇತ್ರಗಳ ಗೆಲುವು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಉತ್ತಮ ಆಡಳಿತವನ್ನು ನೀಡಿದ್ದು, ಇದೇ ರೀತಿಯ ಆಡಳಿತವನ್ನು ಮುಂದುವರಿಸಿ ಎನ್ನುವ ಸಂದೇಶವನ್ನು ಮತದಾರರು ಫಲಿತಾಂಶದ ಮೂಲಕ ರವಾನಿಸಿದ್ದಾರೆ. ಅಲ್ಲದೇ, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಪವಿತ್ರ ಮೈತ್ರಿಯನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರೇ ತಿರಸ್ಕರಿಸಿದ್ದಾರೆ. ಈ ಮೈತ್ರಿ ಕೇವಲ ಎರಡೂ ಪಕ್ಷಗಳ ಮುಖಂಡರ ನಡುವೆ ಆಗಿರುವ ಮೈತ್ರಿಯೇ ಹೊರತು ಕಾರ್ಯಕರ್ತರ ನಡುವೆ ಆದ ಮೈತ್ರಿಯಲ್ಲ. ವಾಸ್ತವದಲ್ಲಿ ಬಿಜೆಪಿ ಸಿದ್ಧಾಂತವೇ ಬೇರೆ, ಜೆಡಿಎಸ್ ಸಿದ್ಧಾಂತವೇ ಬೇರೆ, ಜೆಡಿಎಸ್ ಕಾರ್ಯಕರ್ತರು ಎಂದೂ ಕೂಡ ಬಿಜೆಪಿ ಸಿದ್ಧಾಂತವನ್ನು ಒಪ್ಪಲು ಸಾಧ್ಯವೇ ಇಲ್ಲ ಇದನ್ನು ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಜಾತ್ಯತೀತ ನಿಲುವನ್ನು ಹೊಂದಿರುವ ವ್ಯಕ್ತಿ, ಕೋಮುವಾದಿ ಸಿದ್ದಾಂತವನ್ನು ಹೊಂದಿರುವ ಪಕ್ಷದೊಡನೆ ಎಂದೂ ಕೂಡ ರಾಜಿಯಾಗಲಾರ ಎನ್ನುವ ಸಂದೇಶವನ್ನು ಮೂರೂ ಕ್ಷೇತ್ರಗಳ ಮತದಾರರು ರವಾನಿಸಿದ್ದು, ವಿಶೇಷವಾಗಿ ಚೆನ್ನಪಟ್ಟಣ ಕ್ಷೇತ್ರದಲ್ಲಿ ಜನ ಇದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್ ಪಕ್ಷ 168 ಭರವಸೆಗಳನ್ನು ನೀಡಿತ್ತು. ಇದರಲ್ಲಿ 165 ಭರವಸೆಗಳನ್ನು ಈಡೇರಿಸಲಾಗಿತ್ತು. ಅದನ್ನು ಮನಗಂಡೇ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮತ್ತೊಮ್ಮೆ ರಾಜ್ಯದಲ್ಲಿ ಬರಬೇಕೆನ್ನುವುದು ರಾಜ್ಯದ ಜನರ ಆಶಯವಾಗಿತ್ತು. ಆ ಕಾರಣದಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ 136 ಸೀಟುಗಳನ್ನು ಕೊಟ್ಟು ಸರ್ಕಾರ ನಡೆಸಲು ಅನುವು ಮಾಡಿ ಕೊಟ್ಟಿದ್ದರು.
ವಾಸ್ತವ ಹೀಗಿದ್ದರೂ ಬಿಜೆಪಿ ಒಂದು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುವುದನ್ನು ಬಿಟ್ಟು ರಾಜ್ಯದ ಜನರಲ್ಲಿ ಕೋಮು ಭಾವನೆಗಳನ್ನು ಬಿತ್ತುವ ಕೆಲಸದಲ್ಲಿ ನಿರತವಾಗಿತ್ತು. ಅನಗತ್ಯ ವಿಚಾರಗಳನ್ನು ಮುನ್ನಲೆಗೆ ತಂದು ಜನರಲ್ಲಿ ತಪ್ಪು ಭಾವನೆಗಳನ್ನು ಬಿತ್ತುತ್ತಿರುವುದನ್ನು ಈ ರಾಜ್ಯದ ಜನರು ಸಹಿಸುವುದಿಲ್ಲ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ ಎಂದು ಪುಟ್ಟಸಿದ್ದೇಗೌಡ ಬಣ್ಣಿಸಿದರು.
ರಾಜ್ಯದ ಜನರ ನಿರೀಕ್ಷೆಯಂತೆ ಪಕ್ಷಗಳು ಕೆಲಸ ಮಾಡಬೇಕಾಗಿರುವುದು ಬಹುಮುಖ್ಯ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ನೀತಿಗಳೇ ಅವರ ಸೋಲಿಗೆ ಕಾರಣವಾಗಿದ್ದು, ಈ ಎರಡೂ ಪಕ್ಷಗಳ ಮುಖಂಡರು ಸೋಲಿನ ಹೊಣೆಯನ್ನು ಹೊತ್ತು ಇನ್ನು ಮುಂದಾದರೂ ರಾಜ್ಯದಲ್ಲಿ ಕೋಮುಭಾವನೆ ಬಿತ್ತುವುದನ್ನು ಬಿಟ್ಟು ರಚನಾತ್ಮಕವಾಗಿ ಕೆಲಸ ಮಾಡಬೇಕಿದೆ.
ಒಟ್ಟಾರೆಯಾಗಿ ರಾಜ್ಯದ ಮೂರು ಕ್ಷೇತ್ರಗಳ ಮತದಾರರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದು, ನಿಮ್ಮ ಜೊತೆ ನಾವಿದ್ದೇವೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಈ ಚುನಾವಣೆಯ ಫಲಿತಾಂಶದಿಂದಲಾದರೂ ವಿರೋಧ ಪಕ್ಷಗಳು ಪಾಠಕಲಿತು ಮುಂದೆ ಎಚ್ಚರಿಕೆಯ ನಡೆಯನ್ನು ಇಡುವುದು ಒಳಿತು ಎಂದು ಪುಟ್ಟಸಿದ್ದೇಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
40 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಎಂದು ಕೂಡ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ಮಾಡಿಕೊಂಡು ಬಂದ ಸಿದ್ದರಾಮಯ್ಯನವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವರ ತೇಜೋವಧೆಗೆ ಪ್ರಯತ್ನಿಸಿದ ವಿಪಕ್ಷಗಳ ಕಾರ್ಯ ವೈಖರಿಯನ್ನು ರಾಜ್ಯದ ಜನ ಸಹಿಸುವುದಿಲ್ಲ ಎಂದು ಈ ಚುನಾವಣೆಯಲ್ಲಿ ತೋರಿಸಿದ್ದಾರೆ. ಮೂರು ಕ್ಷೇತ್ರಗಳ ಗೆಲುವು ಜಾತ್ಯತೀತ ಸಿದ್ದಾಂತಕ್ಕೆ ಸಿಕ್ಕ ಗೆಲುವಾಗಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.
0 ಕಾಮೆಂಟ್‌ಗಳು