ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿಯಿಂದ ವಕ್ಫ್ ವಿವಾದ ಸೃಷ್ಟಿ : ವಕೀಲ ಪುಟ್ಟಸಿದ್ದೇಗೌಡ ಆರೋಪ

ಪತ್ರಕರ್ತರು, ವಕೀಲರನ್ನು ವೃತ್ತಿ ತೆರಿಗೆ ವ್ಯಾಪ್ತಿಯಿಂದ ಕೈ ಬಿಡಲು ಒತ್ತಾಯ



ಮೈಸೂರು : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಏಕೈಕ ಉದ್ದೇಶದಿಂದ ಬಿಜೆಪಿ ವಕ್ಫ್ ವಿವಾದ ಹುಟ್ಟು ಹಾಕಿದೆ. ಇದರಿಂದ ಯಾವುದೇ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸಿಎಂ ಹೇಳಿರುವುದರಿಂದ ರೈತರು ಆತಂಕ ಪಡಬೇಕಿಲ್ಲ ಎಂದು ಹಿರಿಯ ವಕೀಲರಾದ ಪುಟ್ಟಸಿದ್ದೇಗೌಡ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ನಡೆದ ಉಪ ಚುನಾವಣೆ ಮತ್ತು ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ತನ್ನ ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಯಾವುದೇ ವಿಷಯ ಇಲ್ಲವಾದ್ದರಿಂದ ಕಾಂಗ್ರೆಸ್ ಪಕ್ಷದ ವಿರುದ್ಧ ವಕ್ಫ್ ವಿಚಾರವನ್ನು ಮುನ್ನಲೆಗೆ ತಂದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಯಾವುದೇ ರೈತರು ಇದರಿಂದ ಆತಂಕ ಪಡಬೇಕಿಲ್ಲ ಎಂದು ಹೇಳಿದರು.

ವಕ್ಪ್ ಕಾಯ್ದೆ ಭಾರತದ ಸಂವಿಧಾನದ ಅಡಿಯಲ್ಲಿರುವ ಕಾನೂನು ಕಟ್ಟಳೆಗಳ ಮೂಲಕವೇ ರಚಿತವಾಗಿದೆ. ಇದಕ್ಕೇನೂ ಪ್ರತ್ಯೇಕ ಕಾನೂನು ಇಲ್ಲ. ಮುಸ್ಲಿಂ ಸಮುದಾಯದ ಶಿಕ್ಷಣ, ಆರೋಗ್ಯದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಅದೇ ಸಮುದಾಯದ ಉಳ್ಳವರು ದಾನ ಮಾಡಿರುವ ಭೂಮಿಯನ್ನು ವಕ್ಫ್ ಮಂಡಳಿ ನಿರ್ವಹಣೆ ಮಾಡುತ್ತದೆ. 1954 ರಲ್ಲೇ ಈ ಬಗ್ಗೆ ಕಾನೂನು ರಚಿಸಲಾಗಿದೆ. ಕಾಲ ಕಾಲಕ್ಕೆ ತಿದ್ದುಪಡಿಯೂ ಆಗಿದೆ. ವಕ್ಫ್ ಅದಾಲತ್ ಇದೊಂದು ನಿರಂತರ ಪ್ರಕ್ರಿಯೆ, ಬಿಜೆಪಿ ಕಾಲದಲ್ಲೂ ನಡೆದಿದೆ. 

ವಕ್ಫ್ ಆಸ್ತಿಯನ್ನು ಮುಸ್ಲೀಮರೇ ಹೆಚ್ಚಾಗಿ ಕಬಳಿಕೆ ಮಾಡಿದ್ದಾರೆ

ಎನ್ನುವ ಆರೋಪವನ್ನು ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿದೆ. ಬಿಜೆಪಿ ಸರ್ಕಾರದಲ್ಲಿ ರಚಿಸಲಾಗಿದ್ದ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಬಿಜೆಪಿ ಸರ್ಕಾರಕ್ಕೆ ನೀಡಲಾಗಿತ್ತಾದರೂ ಅದನ್ನೇಕೆ ಅವರು ಅನುಷ್ಠಾನ ಮಾಡಲಿಲ್ಲ ಎಂದು ಪುಟ್ಟಸಿದ್ದೇಗೌಡ ಪ್ರಶ್ನಿಸಿದರು.

ಆಡಳಿತಾರೂಢ ಒಂದು ಜನಪ್ರಿಯ ಸರ್ಕಾರವನ್ನು ತೇಜೋವಧೆ ಮಡುವ ದೃಷ್ಟಿಯಿಂದ ಬಿಜೆಪಿ ಸಲ್ಲದ ಆರೋಗಳನ್ನು ಮಾಡುತ್ತಿದೆ. ರಾಜ್ಯದ ಜನರು ಇದನ್ನು ಗಮನಿಸುತ್ತಿದ್ದಾರೆ ಎಂದರು.

ವಕೀಲರು, ಪತ್ರಕರ್ತರು ತೆರಿಗೆ ವ್ಯಾಪ್ತಿಗೆ ಬೇಡ

ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಕೀಲರು ಮತ್ತು ಪತ್ರಕರ್ತರನ್ನು ಹಿಂದಿನ ಬಿಜೆಪಿ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ತೆರಿಗೆ ವ್ಯಾಪ್ತಿಗೆ ತಂದಿರುವುದು ಖಂಡನೀಯ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರು ಮತ್ತು ವಕೀಲರನ್ನು ತೆರಿಗೆ ವ್ಯಾಪ್ತಿಯಿಂದ ಕೈ ಬಿಡಬೇಕು ಎಂದು ಪುಟ್ಟಸಿದ್ದೇಗೌಡ ಒತ್ತಾಯಿಸಿದರು.

ಪತ್ರಕರ್ತರು ಮತ್ತು ವಕೀಲರ ಸ್ಥಿತಿಗಳು ಇಂದು ದನನೀಯವಾಗಿದೆ. ಆದರೇ, ಎರಡು ವೃತ್ತಿಗಳು ಇಂದು ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯುತ್ತಿವೆ. ಹೀಗಿರುವಾಗ ಸರ್ಕಾರಗಳು ಪತ್ರಕರ್ತರು ಮತ್ತು ವಕೀಲರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸುವ ಬದಲು ಅವರಿಗೆ ವೃತ್ತಿ ತೆರಿಗೆ ಮೂಲಕ ಬರೆ ಹಾಕುವುದು ಎಷ್ಟು ಸರಿ?  

ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ, ಕರ್ನಾಟಕ ವೃತ್ತಿ ತೆರಿಗೆ ಕಾಯ್ದೆ 1976ಕ್ಕೆ ತಿದ್ದುಪಡಿ ನಂ.14 oಜಿ 2023 ಪ್ರಕಾರ 14-03-2023 ರಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ. ಸೆಕ್ಷನ್ 29ರ ಪ್ರಕಾರ ಪತ್ರಕರ್ತರು ಮತ್ತು ವಕೀಲರಿಗೆ ವಿನಯಿತಿ ಕೊಡಲು ಅವಕಾಶ ಇರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ ಪತ್ರಕರ್ತರು ಮತ್ತು ವಕೀಲರನ್ನು ವೃತ್ತಿ ತೆರಿಗೆ ಪಾವತಿ ಮಾಡುವುದರಿಂದ ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವಕೀಲರಾದ ವಿಷ್ಣುವರ್ಧನ್, ಎನ್.ಲೋಕೇಶ್, ಪಿ.ಸೋಮರಾಜು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು