ಮೈಸೂರು : ವಕ್ಫ್ ಆಸ್ತಿ ಹೆಸರಲ್ಲಿ ಹತ್ತಾರು ವರ್ಷಗಳಿಂದ ಅನುಭವದಲ್ಲಿರುವ ಯಾವುದೇ ಸಮುದಾಯದ ರೈತರನ್ನು ಒಕ್ಕಲೆಬ್ಬಿಸಿದರೆ ರೈತಸಂಘ ಸಹಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಹೇಳಿದ್ದಾರೆ.
ಶುಕ್ರವಾರ ಮೈಸೂರಿನ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಅವರು ಮಾತನಾಡಿ, ಸರ್ಕಾರ ರೈತರ ಅನುಭವ, ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು. ಸುದೀರ್ಘ ಅನುಭವದಲ್ಲಿರುವ ರೈತರಿಗೆ ಅನುಭವ ಮುಂದುವರಿಸಬೇಕು. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ಓಟ್‌ಬ್ಯಾಂಕ್ ರಾಜಕೀಯವನ್ನು ಬದಿಗಿಟ್ಟು, ರೈತಕುಲವನ್ನು ಉಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಹೇಳಿದರು. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಈ ಸಂಬಂಧ ಗಲಭೆಗಳನ್ನು ಸೃಷ್ಟಿಸಲಾಗಿದೆ. ಸರ್ಕಾರ ಗಲಭೆಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ತಮ್ಮ ಬೇಳೆ ಬೇಯಿಸಿಕೊಳ್ಳಲು ರೈತರನ್ನು, ಅಮಾಯಕರನ್ನು ಬಲಿಪಶು ಮಾಡಬಾರದು. ನಿಜವಾಗಿಯೂ ವಕ್ಫ್ ಆಸ್ತಿಯೇ ಆಗಿದ್ದರೂ ಕೂಡ ರೈತರ ಅನುಭವ ಮುಂದುವರಿಸಬೇಕು. ಈ ಸಂಬಂಧ ರೈತರು ನಡೆಸುವ ಕಾನೂನು ಹೋರಾಟಕ್ಕೆ ರೈತಸಂಘ ಬೆಂಬಲಿಸುತ್ತದೆ. ಆದರೇ, ಇತರೆ ಸರ್ಕಾರಿ ಆಸ್ತಿಗೆ ವಕ್ಫ್ ಆಸ್ತಿ ಎಂದು ನಾಮಕರಣ ಮಾಡುವುದು ತಪ್ಪು ರಾಜ್ಯ ಸರ್ಕಾರ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು ಎಂದರು.
ರೈತರು ಕೇವಲ ವಕ್ಫ್ ಆಸ್ತಿಯಲ್ಲದೇ, ಯಾವುದೇ ಸರ್ಕಾರಿ ಜಮೀನು, ಮಠ ಮಾನ್ಯಗಳ ಜಮೀನು, ಟ್ರಸ್ಟ್‌ಗಳ ಜಮೀನುಗಳನ್ನು ಉಳುಮೆ ಮಾಡುತ್ತಿದ್ದರೆ ಅದನ್ನು ಮುಂದುವರಿಸಬೇಕು. ಒಕ್ಕಲೆಬ್ಬಿಸಬಾರದು. ಒಂದು ವೇಳೆ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರೆ ಇಡೀ ರಾಜ್ಯದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ನವೆಂಬರ್ 10 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ರೈತಸಂಘಟನೆಗಳ ಒಕ್ಕೂಟದ ಸಭೆ ನಡೆಯಲಿದ್ದು ಅಂದು ಈ ಸಂಬಂಧ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುತ್ತದೆ ಎಂದರು.
0 ಕಾಮೆಂಟ್‌ಗಳು