ಕ್ರೀಡಾ ಇಲಾಖೆಯಿಂದ ಅಂತಾರಾಷ್ಟ್ರೀಯ ಕ್ರೀಡೆಗೆ ನಿರ್ಲಕ್ಷ್ಯ ಆರೋಪ
ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ಕರಾಟೆ ಸ್ಪರ್ಧೆಗೆ ಅವಕಾಶ ನಿರಾಕರಿಸಿದ್ದು, ಪ್ರತಿಭಟನೆ ನಡೆಸುವುದಾಗಿ ಮೈಸೂರು ಕರಾಟೆ ಅಸೋಸಿಯೇಷನ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.
ಈ ಕುರಿತು ಅಸೋಸಿಯೇಷನ್ ಖಜಾಂಚಿ ಸೋಸಲೆ ಸಿದ್ದರಾಜು ಮಾಧ್ಯಮದವರೊಂದಿಗೆ ಮಾತನಾಡಿ, ಮೈಸೂರು ನಗರ ಒಂದರಲ್ಲೇ ಸುಮಾರು 20 ಸಾವಿರ ಮಕ್ಕಳು ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಲಿಂಗ ತಾರತಮ್ಯವಿಲ್ಲದೆ ಕರಾಟೆ ಕಲಿಯುತ್ತಿದ್ದಾರೆ. ಕರಾಟೆ ಒಂದು ಸ್ವಯಂ ರಕ್ಷಣಾ ಕಲೆಯಾಗಿದ್ದು, ಇಂದಿನ ದಿನಗಳಲ್ಲಿ ಅದು ಅನಿವಾರ್ಯವಾಗಿದೆ. ಬಜೆಟ್ ಇಲ್ಲದ ಕಾರಣ ಕರಾಟೆ ಪಂದ್ಯಾವಳಿಗೆ ಅವಕಾಶ ನೀಡಲು ಆಗುತ್ತಿಲ್ಲ ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಹೇಳುತ್ತಿದ್ದಾರೆ. ಒಂದು ಕಡೆ ಸರ್ಕಾರ ಈ ಬಾರಿ ಅದ್ದೂರಿ ಸದರಾ ಮಾಡುತ್ತಿದ್ದೇವೆ. 40 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತಿದೆ. ಮತ್ತೊಂದು ಕಡೆ ಬಜೆಟ್ ಇಲ್ಲ ಎಂದು ಕರಾಟೆ ಪಂದ್ಯಾವಳಿ ನಿರಾಕರಿಸಲಾಗಿದೆ. ಕಳೆದ ವರ್ಷ ಸರಳ ದಸರಾದಲ್ಲಿ ಕರಾಟೆ ಪಂದ್ಯಾವಳಿ ಅದ್ದೂರಿಯಾಗಿ ನಡೆದಿತ್ತು. ಈ ಬಾರಿ ಅದ್ದೂರಿ ದಸರಾದಲ್ಲಿ ಕರಾಟೆ ಪಂದ್ಯಾವಳಿ ನಿರಾಕರಿಸಿರುವುದು ಬೇಸರ ತಂದಿಗೆ ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಮೌನ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ದಸರಾ ಸಮಿತಿಯಿಂದ ಕಳೆದ 14 ವರ್ಷಗಳಿಂದ ನಾವು ಜಿಲ್ಲಾ ಮಟ್ಟ, ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದ ಪಂದ್ಯಾವಳಿ ನಡೆಸುತ್ತಿದ್ದೆವು. ಈ ಬಾರಿ ಸ್ಪರ್ಧೆ ನಿರಾಕರಿಸಿರುವುದು ಬೇಸರ ತಂದಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ದಕ್ಷಿಣ ಭಾಗದ ಉಪಾಧ್ಯಕ್ಷರಾದ ಎನ್.ಶಂಕರ್, ಮೈಸೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿವದಾಸ್ ಎನ್.ಜಿ., ಕಾರ್ಯದರ್ಶಿ ದೀಪಕ್‍ಕುಮಾರ್, ಮಹಿಳಾ ವಿಭಾಗದ ಅಧ್ಯಕ್ಷರಾದ ಭಾರತಿ ಆನಂದ್, ಆಕರ್ಷ ಅರಸ್ ಇದ್ದರು.
0 ಕಾಮೆಂಟ್‌ಗಳು