ಪಾಂಡವಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅದ್ದೂರಿಯಾಗಿ ನಡೆದ ಗುರುವಂದನೆ, ಸ್ನೇಹ ಸಮ್ಮಿಲನ
ಅಕ್ಟೋಬರ್ 20, 2024
ಪಾಂಡವಪುರ; ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ 2006-07ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಭಾನುವಾರ ಕಾಲೇಜಿನ ರಾಷ್ಟ್ರಕವಿ
ಕುವೆಂಪು ರಂಗ ಮಂದಿರದಲ್ಲಿ
ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
18 ವರ್ಷದ ಸ್ನೇಹ ಸಂಕೇತವಾಗಿ ಹಮ್ಮಿಕೊಂಡಿದ್ದ ಈ ಗುರುವಂದನಾ ಕಾರ್ಯಕ್ರಮದಲ್ಲಿ 2006-07 ನೇ ಸಾಲಿನಲ್ಲಿ ಪಾಠ ಮಾಡಿದ್ದ ಉಪನ್ಯಾಸಕರನ್ನು ವಿದ್ಯಾರ್ಥಿಗಳು ಅದ್ದೂರಿಯಾಗಿ ಸನ್ಮಾನಿಸಿದರು.
ಬೆಳಗ್ಗೆ ಸುಮಾರು 11 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು. ತಮ್ಮ ಗುರುಗಳನ್ನು ವಿದ್ಯಾರ್ಥಿಗಳು ಪುಷ್ಪಾರ್ಚನೆ ಮೂಲಕ ವೇದಿಕೆಗೆ ಕರೆತಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರೀತಿಗೆ ಉಪನ್ಯಾಸಕರು ಭಾವಪರವಶರಾದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತೊಮ್ಮೆ ಪರಸ್ಪರ ತಮ್ಮ ಪರಿಚಯ ಮಾಡಿಕೊಂಡರು.
ಅಂದು ವ್ಯಾಸಂಗ ಮಾಡಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಕೆಲವರು ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಶಿಕ್ಷಕರಾಗಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸೇವೆಯಲ್ಲಿ ವೃತ್ತಿ ಮಾಡುತ್ತಿರುವುದನ್ನು ಕೇಳಿ ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಜತೆಗೆ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಖಾಸಗಿ ವೃತ್ತಿಯನ್ನು ಮಾಡುತ್ತಿರುವುದು, ಕೃಷಿಕರಾಗಿರುವುದೂ ಕಂಡುಬಂತು.
ಈ ವೇಳೆ ಸ್ನೇಹ ಸಮ್ಮಿಲನದಲ್ಲಿ ಭಾಗವಹಿದ್ದ ಬಹುತೇಕರು ವಿವಾಹಿತರಾಗಿದ್ದು ಕುಟುಂಬದವರ ಪರಿಚಯವನ್ನೂ ಸಹ ಮಾಡಿಕೊಟ್ಟಿದ್ದು ಗಮನಸೆಳೆಯಿತು.
ಬಳಿಕ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಆತ್ಮೀಯವಾಗಿ ಅಭಿನಂದಿಸಿದರು.
ಬಹುತೇಕ ವಿದ್ಯಾರ್ಥಿಗಳು ಇಂದು ಪ್ರೌಢ ರಾಗಿದ್ದರೂ ತಮ್ಮ ಗುರುಗಳ ಪಾದ ಸ್ಪರ್ಷಿಸಿ, ನಮಸ್ಕರಿಸಿ ಅವರನ್ನು ಪುಳಕಿತಗೊಳಿಸಿದರು.
ಈ ವೇಳೆ ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕರಾದ ವಿ.ಆರ್.ಶ್ಯಾಮಲ ಅವರು ತಾವು 2006-07 ರಲ್ಲಿ ಪಾಂಡವಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ವೇಳೆ ಈ
ಕಾಲೇಜಿನಲ್ಲಿ ನಡೆದ ಅನೇಕ ಘಟನಾವಳಿಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳನ್ನು ರಂಜಿಸಿದರು.
ತಾವು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಬಂಕ್ ಮಾಡಿ ಕಾಂಪೌಂಡ್ ಹಾರಿ ಹೊರಗಡೆ ಹೋಗುತ್ತಿದ್ದನ್ನು ನೆನಪಿಸಿದರು.
2006-07 ರಲ್ಲಿ ಕಾಲೇಜಿಗೆ ಕಟ್ಟಡ ಇರಲಿಲ್ಲ ಪ್ರೌಢಶಾಲೆಗೆ ಸೇರಿದ ಹೆಂಚಿನ ಕಟ್ಟಡದಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ಮಳೆ ಬಂದಾಗ ನೀರು ಸೋರುತ್ತಿತ್ತು. ಸಾಕಷ್ಟು ಸಮಸ್ಯೆ ಇತ್ತು ಈಗ ಭವ್ಯವಾದ ಕಟ್ಟಡ ನಿರ್ಮಾಣ ವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಸಮಾಜ ಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕರಾದ ಶ್ರೀನಿವಾಸ್ ಸೇರಿದಂತೆ ಹಲವರು ಮಾತನಾಡಿದರು.
ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚಲುವಯ್ಯ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣೇಗೌಡ, ನಿವೃತ್ತ ಉಪನ್ಯಾಸಕರಾದ ಸುರೇಶ್, ಶ್ರೀಲತಾ, ಉಪನ್ಯಾಸಕರಾದ ಮಹೇಶ್, ಶಿವಪ್ರಕಾಶ್, ಡಾ.ರೇಖಾ,
ಹಿರಿಯ ವಿದ್ಯಾರ್ಥಿಗಳಾದ ಲೋಕರಕ್ಷಕ,ಹರೀಶ್, ರವಿ, ರೂಪ, ನಂದೀಶ್, ರಾಘು, ಶಶಿಕುಮಾರ್ ಮುಂತಾದವರು ಇದ್ದರು.
ಕಾರ್ಯಕ್ರಮ ದ ಬಳಿಕ ಭೋಜನ ಕೂಟ ಏರ್ಪಡಿಸಲಾಗಿತ್ತು.
0 ಕಾಮೆಂಟ್‌ಗಳು