ಮೈಸೂರಿನಲ್ಲಿ ಸಾವಿತ್ರಿಬಾಯಿ ಫುಲೇ ವಿಚಾರ ಸಂಕಿರಣ ಮತ್ತು ರಾಜ್ಯ ಕಾರ್ಯಕಾರಿ ಸಭೆ, ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ


 ಮೈಸೂರು : ಸಾಕಷ್ಟು ಜನರಿಗೆ ಇನ್ನೂ ಕೂಡ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೇ ಅವರ ಪರಿಚಯವೇ ಇಲ್ಲ. ಅವರನ್ನು ಶಿಕ್ಷಕರು ಜಗತ್ತಿಗೆ ಪರಿಚಯಿಸಬೇಕಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಸಾವಿತ್ರಿಬಾಯಿ ಫುಲೇ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್, ಕರ್ನಾಟಕ ಸಾವಿತ್ರಿ ಬಾಯಿ ಫುಲೇ ಶಿಕ್ಷಕಿಯರ ಸಂಘದ ರಾಜ್ಯ ಘಟಕ ಶ್ರೀರಾಂಪುರದ ಟಿ.ಎಸ್.ಕನ್ವೇನ್ಷನ್ ಹಾಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಸಾವಿತ್ರಿಬಾಯಿ ಫುಲೇ ವಿಚಾರ ಸಂಕಿರಣ ಮತ್ತು ರಾಜ್ಯ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿತ್ರಿಬಾಯಿ ಫುಲೆ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಎಂದೇ ಗುರುತಿಸಲಾಗುತ್ತದೆ. ಭಾರತದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವುದೆಂದರೆ ಅದೊಂದು ದೊಡ್ಡ ಅಪಚಾರ, ಅಪವಿತ್ರ ಎಂದು ಭಾವಿಸುತ್ತಿದ್ದ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳೂ ಶಿಕ್ಷಣ ಪಡೆಯಬೇಕೆಂದು ಹೋರಾಡಿದ ದಿಟ್ಟಮಹಿಳೆ ಸಾವಿತ್ರಿಬಾಯಿ ಫುಲೆ ಆಗಿದ್ದರು. ಅವರ ಮಾರ್ಗದರ್ಶನ ಇಂದು ಎಲ್ಲರಿಗೂ ಅಗತ್ಯವಾಗಿದೆ ಎಂದು ಜಿಟಿಡಿ ಹೇಳಿದರು.

ಸಾವಿತ್ರಿಬಾಯಿ ಫುಲೆ ಅವರು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕೆಲವು ಜನರು ದಾರಿಯಲ್ಲಿ ಅವರನ್ನು ತಡೆದು ಸೆಗಣಿ, ಕೆಸರು ಎರಚಿ ಅವಮಾನಿಸುತ್ತಿದ್ದರು. ಆದರೂ ಫುಲೆ ಎದೆಗುಂದಲಿಲ್ಲ, ಧೈರ್ಯ ಕಳೆದುಕೊಳ್ಳಲಿಲ್ಲ.

ತಮ್ಮ ಬ್ಯಾಗಿನಲ್ಲಿ ಎರಡು ಸೀರೆಗಳನ್ನುಇಟ್ಟುಕೊಂಡು ಅವರು ಶಾಲೆಗೆ ಹೋಗಿ ಸೆಗಣಿ ತಗುಲಿದ್ದ ಸೀರೆಯನ್ನು ಬದಲಾಯಿಸಿ ಬೇರೆ ಸೀರೆಯನ್ನು ತೊಟ್ಟು ಪಾಠ ಮಾಡುತ್ತಿದ್ದರು. ಇಂತಹ ಧೈರ್ಯ ಎಲ್ಲ ಹೆಣ್ಣು ಮಕ್ಕಳಲ್ಲೂ ಇರಬೇಕು.

ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಅದರ ನಷ್ಟ ಆ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಆಗುತ್ತದೆ ಎಂದು ಭಾವಿಸಿದ್ದ ಸಾವಿತ್ರಿಬಾಯಿ ಫುಲೆ ಅವರು ಅದಕ್ಕಾಗಿ ಅವಿರತವಾಗಿ ಹೋರಾಡಿದರು. ಹಾಗಾಗಿಯೇ ಅವರನ್ನು ‘ಆಧುನಿಕ ಶಿಕ್ಷಣದ ತಾಯಿ’ಯೆಂದು ಕರೆಯಲಾಗುತ್ತದೆ.

೧೯ನೇ ಶತಮಾನದಲ್ಲಿ ತಮ್ಮ ಮನೆಯಲ್ಲಿಯೇ ಶಾಲೆಯನ್ನು ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟು ಅಸ್ಪೃಶ್ಯರು, ದಮನಿತರು, ಶೋಷಿತರು ಹಾಗೂ ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ಅವರು ನಾಂದಿ ಹಾಡಿದರು ಎಂದು ಜಿ.ಟಿ.ದೇವೇಗೌಡ ಹೇಳಿದರು.

ಇಂದು ಶಿಕ್ಷಣ ಕ್ಷೇತ್ರ ಮಾತ್ರ ಭ್ರಷ್ಟಾಚಾರದಿಂದ ದೂರವಿದೆ. ಶಿಕ್ಷಕರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಭಾರತದ ಮುಂದಿನ ಪ್ರಜೆಗಳನ್ನು ರೂಪಿಸುತ್ತಿದ್ದಾರೆ ಎಂದು ನುಡಿದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜವರೇಗೌಡ ಮಾತನಾಡಿ, 

ಸಾವಿತ್ರಿಬಾಯಿ ಫುಲೆ ಅವರು ಇಡುತ್ತಿದ್ದ ಪ್ರತಿ ಹೆಜ್ಜೆಯ ಹಿಂದೆ ಅವರ ಪತಿ ಜ್ಯೋತಿ ಬಾ ಫುಲೆ ಅವರ ಸಹಕಾರವಿರುತ್ತಿತ್ತು. ಅವರಿಬ್ಬರ ದಾಂಪತ್ಯ ಜೀವನವೇ ಒಂದು ಆದರ್ಶ ಬದುಕು. ಶಿಕ್ಷಣದಿಂದ ವಂಚಿತರಾದ ಸಮುದಾಯಕ್ಕಾಗಿ ಶಾಲೆಯನ್ನು ತೆರೆಯುವ ಪಣತೊಟ್ಟು ೧೮೪೮ರಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಅಸ್ಪೃಶ್ಯರು, ಹಿಂದುಳಿದವರು ಹಾಗೂ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಲೆಗಳನ್ನು ತೆರೆದರು. ಆಗ ಕೆಳವರ್ಗದವರ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬಾರದಿದ್ದಾಗ ಜ್ಯೋತಿಬಾ ಫುಲೆ ಅವರು ತಮ್ಮ ಮಡದಿ ಸಾವಿತ್ರಿಬಾಯಿ ಫುಲೆ ಅವರನ್ನೇ ಶಿಕ್ಷಕಿಯನ್ನಾಗಿ ನೇಮಿಸಿದರು.

ಇಂದು ಎಲ್ಲ ಶಿಕ್ಷಕರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೇ ಶಾಲೆಗೆ ಸೇರಿಸಬೇಕು. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಿದಾಗ ಮಾತ್ರ ಶಿಕ್ಷಕರ ಸೇವೆ ಸಾರ್ಥಕ ಎಂದರು.

ಸಾವಿತ್ರಿಬಾಯಿ ಫುಲೇ ರಾಷ್ಟ್ರೀಯ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಡಾ.ಲತಾ ಎಸ್.ಮುಳ್ಳೂರ್, ಮೈಸೂರು ಜಿಲ್ಲಾ ಅಧ್ಯಕ್ಷರಾದ ಸಿ.ಕೆ.ಸರಸ್ವತಿ, ಸರ್ಕಾರಿ ನೌಕರರ ಸಂಘದ ಮೈಸೂರು ಜಿಲ್ಲಾ ಅಧ್ಯಕ್ಷರಾದ ಜೆ.ಗೋವಿಂದರಾಜು, ಡಿವೈಪಿಸಿ ಶೋಭಾ, ಡಯಟ್ ಉಪನ್ಯಾಸಕಾರ ಜಯಂತಿ, ಆಶಾ, ಗಾಯಿತ್ರಿ ಮತ್ತಿತರರು ಇದ್ದರು.

ಜಿಟಿಡಿ ಜತೆ ಸೆಲ್ಫಿಗೆ ಮುಗಿಬಿದ್ದ ಶಿಕ್ಷಕಿಯರು

ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡಿ ಕಾರ್ಯನಿಮಿತ್ತ ಹೊರ ನಡೆದ ಶಾಸಕ ಜಿ.ಟಿ.ದೇವೇಗೌಡರ ಜತೆ ಸೆಲ್ಪೀ ತೆಗೆದುಕೊಳ್ಳಲು ಶಿಕ್ಷಕಿಯರು ಮುಗಿಬಿದ್ದ ಘಟನೆ ನಡೆಯಿತು. ಸಭಾಂಗಣದ ಹೊರಗೆ ಹೋಗುತ್ತಿದ್ದ ಜಿಟಿಡಿ ಅವರನ್ನು ಹಲವಾರು ಶಿಕ್ಷಕಿಯರು ತಡೆದು ಫೋಟೋ ತೆಗೆದುಕೊಂಡರು. ಈ ವೇಳೆ ಆಯೋಜಕರು ಶಿಕ್ಷಕಿಯರು ಸಭಾಂಗಣದ ಒಳಗೆ ಬಂದು ಕುಳಿತುಕೊಳ್ಳಲು ಹಲವಾರು ಬಾರಿ ಮನವಿ ಮಾಡಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು