ಮೈಸೂರು : ನಗರದ ಕುಪ್ಪಣ್ಣ ಪಾರ್ಕ್‍ನಲ್ಲಿ ನಡೆಯುತ್ತಿರುವ ಫಲ ಪುಷ್ಪ ಪ್ರದರ್ಶನಕ್ಕೆ ಭಾನುವಾರ (ಅ.13 ರಂದು) ಸಾರ್ವಜನಿಕರಿಗೆ ಉಚಿತ ಪ್ರವೇಶ ಇದ್ದರೂ ಅಲ್ಲಿನ ಕೌಂಟರ್‍ನಲ್ಲಿ ಕೆಲವರು ಸಾರ್ವಜನಿಕರನ್ನು ಒಳಗೆ ಬಿಡದೆ ತಲಾ 50 ರೂ. ನಗದು ಪಡೆದು ಒಳಗೆ ಪ್ರವೆಶಿಸಲು ಅವಕಾಶ ನೀಡಿರುವ ಘಟನೆ ನಡೆದಿದೆ.
ಸಾವಿರಾರು ಜನರಿಂದ ಹಣ ವಸೂಲಿ ಮಾಡಲಾಗಿದ್ದು, ಇದನ್ನು ಪ್ರಶ್ನಿಸಿದ ಕೆಲವು ಸಾರ್ವಜನಿಕರ ಮೇಲೆ ಗೇಟ್ ಕೀಪರ್‍ಗಳು ಹಲ್ಲೆಗೂ ಮುಂದಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
ಸ್ಥಳದಲ್ಲಿ ಪೊಲೀಸರು ಇದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕುಪ್ಪಣ್ಣ ಪಾರ್ಕಿನಲ್ಲಿ ಹಗಲು ದರೋಡೆ ನಡೆದಿದೆ. ಘಟನೆ ಕುರಿತು ಸಾರ್ವಜನಿಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದು ಅದೀಗ ವೈರಲ್ ಆಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಅನಧಿಕೃತವಾಗಿ ಹಣ ವಸೂಲಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರವೇಶ ದ್ವಾರದ ಟಿಕೆಟ್ ಗುತ್ತಿಗೆಯನ್ನು (ಟೆಂಡರ್) ಬೆಂಗಳೂರಿನ ವಿನೋದ್ ಕುಮಾರ್ ಸಬವಾಲ್ ಅವರಿಗೆ ಸೇರಿದ ಫನ್‍ವಲ್ಡ್ ಅಂಡ್ ರೆಸಾರ್ಟ್ ಇಂಡಿಯಾ ಪ್ರೈ.ಲೀ ಅವರಿಗೆ ನೀಡಲಾಗಿತ್ತು. ಭಾನುವಾರ ಪ್ರವೇಶ ಉಚಿತವಾಗಿದ್ದರೂ ಟಿಕೆಟ್ ಹಣ ವಸೂಲಿ ಮಾಡಿದ್ದರ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳಿಗೂ ಮತ್ತು ಸರ್ಕಾರಕ್ಕೂ ದೂರು ನೀಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
0 ಕಾಮೆಂಟ್‌ಗಳು