ಮುಡಾ ಪ್ರಕರಣ: ತನಿಖಾ ವರದಿ ಬರುವ ತನಕ ಸಿಎಂ ಸಿದ್ದರಾಮಯ್ಯ ತೇಜೋವಧೆ ಸಲ್ಲದು: ಹಿರಿಯ ವಕೀಲ ಜೆ.ಎನ್.ಲಕ್ಷ್ಮಣ್


ಮೈಸೂರು : ಮುಡಾ ಪ್ರಕರಣವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಲು ವಿರೋಧ ಪಕ್ಷಗಳು ಹೂಡಿರುವ ಒಂದು ಕುತಂತ್ರ ಎಂದು ಮೈಸೂರಿನ ಹಿರಿಯ ವಕೀಲರಾದ ಜೆ.ಎನ್.ಲಕ್ಷ್ಮಣ್ ಹೇಳಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ತಮಗೆ ಮುಡಾದಿಂದ ನೀಡಲಾಗಿದ್ದ ೧೪ ನಿವೇಶನಗಳನ್ನು ಮತ್ತೆ ವಾಪಸ್ ಮಾಡಿರುವುದು ಅವರ ವೈಯುಕ್ತಿಕ ನಿರ್ಧಾರ ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೇ, ಅವರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿರುವಂತೆ ಮುಡಾದಲ್ಲಿ ಇದುವರೆಗೂ ನಡೆದಿರುವ ಎಲ್ಲ ಹಗರಣಗಳ ತನಿಖೆಯೂ ನಡೆಯಬೇಕು ಎಂದು ಲಕ್ಷ್ಮಣ್ ಆಗ್ರಹಿಸಿದರು.

ನೋಡಿ ಇದು ಕ್ರೋಧಿನಾಮ ಸಂವತ್ಸರ, ಯಾರು ಕ್ರೋಧ ಮಾಡುತ್ತಾರೋ ಅವರೇ ಮುಗಿದು ಹೋಗುತ್ತಾರೆ. ಇದಕ್ಕಾಗಿ ಯಾರೂ ಯಾರ ಬಗ್ಗೆಯೂ ಕ್ರೋಧ ಮಾಡಬಾರದು.  

ಮುಡಾ ಪ್ರಕರಣದ ೧೪ ಸೈಟುಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವ ಹಸ್ತಕ್ಷೇಪವೂ ಇಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮಂತ್ರಿಗಳು ಉತ್ತರ ಭಾರತದ ಚುನಾವಣಾ ಪ್ರಚರದ ಸಂದರ್ಭದಲ್ಲಿ ಮುಡಾ ಪ್ರಕರಣ ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ಅವರನ್ನು ಸದಾಕಾಲ ತೇಜೋವಧೆ ಮಾಡುತ್ತಿದ್ದಾರೆ ಇದು ತಪ್ಪು. ಮುಡಾ ವಿಚಾರದಲ್ಲಿ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿ ಅದೂ ಸಹ ತನಿಖೆ ನಡೆಸುತ್ತಿದೆ. ವರದಿ ಬಂದ ನಂತರ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಬೇಕು. ಅದನ್ನು ಬಿಟ್ಟು ಪದೇ ಪದೇ ತೇಜೋವಧೆ ಮಾಡಬಾರದು ಎಂದು ಹಿರಿಯ ವಕೀಲರಾದ ಜೆ.ಎನ್.ಲಕ್ಷ್ಮಣ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು