ಮೈಸೂರು : ಉತ್ತರ ಕರ್ನಾಟಕದಲ್ಲಿ ಸರ್ಕಾರ ಭೂ ಸ್ವಾಧೀನ ಪಡಿಸಿಕೊಂಡಿದ್ದ ರೈತರ ಜಮೀನಿಗೆ ಪರಿಹಾರ ಕೊಡಿಸುವ ನೆಪದಲ್ಲಿ ರೈತ ಸಂಘಟನೆ ರಾಜ್ಯಾಧ್ಯಕ್ಷರೊಬ್ಬರು ಸುಮಾರು 7.5ಕೋಟಿ ಹಣವನ್ನು ಕಮೀಷನ್ ಆಗಿ ಪಡೆದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಆರೋಪಿಸಿದರು.
ತಾಲ್ಲೂಕಿನ ಜಯಪುರ ಹೋಬಳಿ ಹೊಸಕೆರೆ ಗ್ರಾಮದಲ್ಲಿ ಸಂಘಟನೆಯ ನೂತನ ಹೋಬಳಿ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹಳಷ್ಟು ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ರೈತಸಂಘಟನೆಗಳ ಹೆಸರನ್ನು ಬಳಸಿಕೊಂಡು ಹಣ ಮಾಡುತ್ತಿದ್ದಾರೆ. ರೈತ ಶಕ್ತಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇವರೆಲ್ಲಾ ನಕಲಿ ಹೋರಾಟಗಾರರು, ಮೈಸೂರಿನ ಕರೂರು ವೈಶ್ಯಾ ಬ್ಯಾಂಕಿನಲ್ಲಿ ಸಾಲ ಪಡೆದಿರುವ ರೈತರಿಗೆ ಸಾಲಮನ್ನಾ ಮಾಡಿಸುವ ಆಮಿಷವೊಡ್ಡಿ ಇದೇ ಮುಖಂಡರು ಸಾಲಗಾರ ರೈತರಿಂದ ತಲಾ 10 ಸಾವಿರ ರೂ. ಹಣ ವಸೂಲಿ ಮಾಡಿದ್ದಾರೆ. ಮುಖಂಡರುಗಳು ಇಂದು ಐಶಾರಾಮಿ ಮನೆ ಮಾಡಿಕೊಂಡು ಭರ್ಜರಿ ಕಾರಿನಲ್ಲಿ ಓಡಾಡುತ್ತಿದ್ದರೇ, ರೈತ ಮಾತ್ರ ಇನ್ನೂ ಕಾಲಿಗೆ ಚಪ್ಪಲಿ ಇಲ್ಲದಂತೆ ಬಿಸಿಲು ಮಳೆ ಎನ್ನದೆ ಬರಿಗಾಲಲ್ಲಿ ತಿರುಗಾಡುತ್ತಾ ಎಂದಿನಂತೆ ತನ್ನ ಕಷ್ಟದ ಬದುಕಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ರೈತಮುಖಂಡರನ್ನು ನಂಬಬೇಡಿ, ಅವರನ್ನು ಗ್ರಾಮದೊಳಗೆ ಸೇರಿಸಬೇಡಿ ಎಂದು ಸಲಹೆ ನೀಡಿದರು.
ಹೊಸಕೆರೆ ಗ್ರಾಮ ಇನ್ನೂ ಕಂದಾಯ ಗ್ರಾಮವಾಗಿ ಘೋಷಣೆಯಾಗಿಲ್ಲ. ಇಲ್ಲಿನ ರೈತರ ನೂರಾರು ಎಕರೆ ಜಮೀನು ದುರಸ್ತು ಆಗಿಲ್ಲ ಎಂಬ ಕೊರಗು ಈ ಭಾಗದ ರೈತರಲ್ಲಿ ಕಾಡುತ್ತಿದ್ದೆ. ಈ ಬಗ್ಗೆ ಕಂದಾಯ ಸಚಿವರ ಗಮನ ಸೆಳೆದು ರೈತರ ಜಮೀನು ದುರಸ್ತು, ಪೋಡು ಮಾಡಿಕೊಡುವ ಬಗ್ಗೆ ನಮ್ಮ ರೈತಸಂಘ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ. ಈ ಹಿಂದೆ ಇಲ್ಲಿ ತಹಸೀಲ್ದಾರ್ ಆಗಿದ್ದ ಮಹನೀಯರೊಬ್ಬರು ಸುಮಾರು 23 ಎಕರೆ ಗೋಮಾಳದ ಜಮೀನನ್ನು ಲ್ಯಾಂಡ್ ಡೆವಲಪರ್‍ಗೆ ಖಾತೆ ಮಾಡಿಕೊಟ್ಟಿದ್ದಾರೆ. ಇಂದು ಈ ಭೂಮಿಯ ಬೆಲೆ 5 ಸಾವಿರ ಕೋಟಿ ಆಗುತ್ತದೆ. ಈ ಬಗ್ಗೆ ದಾಖಲೆ ಸಂಗ್ರಹ ಮಾಡುತ್ತಿದ್ದೇವೆ. ಬಳಿಕ ಇದನ್ನು ಸರ್ಕಾರದ ಗಮನಕ್ಕೆ ತಂದು ಭೂಮಿಯನ್ನು ಮತ್ತೆ ಗೋಮಾಳವಾಗಿ ಪರಿವರ್ತಿಸುವ ಬಗ್ಗೆ ಸಂಘ ಪ್ರಯತ್ನಿಸುತ್ತದೆ ಎಂದು ಹೇಳಿದರು.
ಈ ಭಾಗದ ಭೂಮಿಗೆ ಬೆಲೆ ಬಂದಿದೆ. ನೂರಾರು ಜನರು ದಿನನಿತ್ಯ ಈ ಭಾಗದ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ರೈತಸಂಘ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೈತಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೀರಪ್ಪ ದೇಶನೂರು ಮಾತನಾಡಿ, ರೈತರಿಗೆ ಯಾವುದೇ ಸಾಲ ಬೇಡ, ಸಬ್ಸಿಡಿ ಬೇಡ ನಮ್ಮ ಬೆಳೆಗೆ ನಿಜವಾದ ಬೆಲೆ ಕೊಟ್ಟರೆ ಸಾಕು. ನಾವು ಬದುಕುತ್ತೇವೆ. ಒಂದು ಕಡೆ ಕೃಷಿ ಉಪಕರಣಗಳ ಬೆಲೆ ಏರಿಕೆ, ರಸಗೊಬ್ಬರಗಳ ಬೆಲೆ ಏರಿಕೆ ಮಾಡುವುದು, ಮತ್ತೊಂದು ಕಡೆ ರೈತರಿಗೆ ಸಬ್ಸಿಡಿ ನೀಡುತ್ತಿದ್ದೇವೆ ಎನ್ನುವುದು. ಮತ್ತು ರೈತನು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದಿರುವುದು ಸರ್ಕಾರಗಳ ಸೊಗಲಾಡಿತನ. ಇದು ನಿಲ್ಲಬೇಕು. ನಮ್ಮ ಬೆಳೆಗೆ ತಕ್ಕ ಬೆಲೆ ಸಿಗಬೇಕು ಎಂದು ಹೇಳಿದರು.
ರೈತಮುಖಂಡ ಬಸವನಗೌಡ ಪಾಟೀಲ್ ಯತ್ನಾಳ ಮಾತನಾಡಿ, ಸ್ವಾತಂತ್ರ್ಯ ಬಂದು 80 ವರ್ಷಗಳಾಗುತ್ತಿವೆ. ಯಾವುದೇ ಸರ್ಕಾರಗಳು ರೈತರ ಪರವಾಗಿಲ್ಲ. ಮುಖಂಡರ ಭರವಸೆಗಳು ಚುನಾವಣೆಗೆ ಸೀಮಿತವಾಗಿವೆ. ದಿನೇ ದಿನೇ ಕೃಷಿಗೆ ಅಗತ್ಯವಾದ ರಸಗೊಬ್ಬರ, ಕೀಟನಾಶಕ, ಉಪಕರಣಗಳ ಬೆಲೆ ಏರುತ್ತಿದ್ದರೂ, ಕೃಷಿ ಉತ್ಪನ್ನಗಳ ಬೆಲೆ ಮಾತ್ರ ಹಾಗೆಯೇ ಇದೆ. ಹೀಗಿದ್ದರೆ ರೈತರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ರೈತಮುಖಂಡರಾದ ನಿಂಗವ್ವ, ವೀರಣ್ಣ ಅಂಗಡಿ, ಮಲ್ಲಿಕ್, ಮಲ್ಲಿಕಾರ್ಜುನ ಕೂಡ್ಲಿಗಿ, ಕೆಆರ್‍ಎಸ್ ರಾಮೇಗೌಡ ಮುಂತಾದವರು ಮಾತನಾಡಿದರು.
ಹೋಬಳಿ ಘಟಕ ಉದ್ಘಾಟನೆಗೂ ಮುನ್ನ ಜಯಪುರದಿಂದ ಹೊಸಕೆರೆ ಗ್ರಾಮದ ತನಕ ನೂರಾರು ರೈತರು, ರೈತ ಮಹಿಳೆಯರು ಅಲಂಕೃತ ಎತ್ತಿನ ಗಾಡಿ ಮತ್ತು ಟ್ರಾಕ್ಟರ್‍ಗಳ ಮೆರವಣಿಗೆ ನಡೆಸಿದರು. ಈ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರೈತ ಮುಖಂಡರು ಪಾದಯಾತ್ರೆ ಮೂಲಕ ಗ್ರಾಮಕ್ಕೆ ಆಗಮಿಸಿ ಗ್ರಾಮ ಘಟಕ ಉದ್ಘಾಟಿಸಿ ಗಮನ ಸೆಳೆದರು.
ಹಸಿರು ಟವಲ್ ಎಂದರೆ ಎಕೆ 47 ಗನ್ ಇದ್ದಂತೆ, ಯಾವುದೇ ಅಧಿಕಾರಿಗಳು, ರಾಜಕಾರಣಿಗಳು ರೈತ ವಿರೋಧಿ ಧೋರಣೆ ಅನುಸರಿಸಿದರೆ ಅವರ ವಿರುದ್ಧ ನೀವು ಗುಡುಗಬೇಕು.ಸಂಘಟನೆಯ ಶಕ್ತಿ ಬಳಸಿಕೊಂಡು ನ್ಯಾಯ ಪಡೆಯಬೇಕು.
ಎಂ.ಕೆ.ಚಂದ್ರಶೇಖರ್, ರೈತಮುಖಂಡರು.
ರೈತರು ಧರಿಸುವ ಹಸಿರು ಟವಲ್ ಅಧಿಕಾರಿಗಳ ಪಾಲಿಗೆ ಶನಿದೇವ ಇದ್ದಂಗೆ. ಒಮ್ಮೆ ಅವರ ಹೆಗಲೇರಿದರೆ ರೈತರ ಕೆಲಸ ಆಗುವತನಕವೂ ಇಳಿಯುವುದಿಲ್ಲ. ನಮ್ಮ ಹಸಿರು ಟವಲ್‍ಗೆ ಅಂತಹ ಶಕ್ತಿ ಇದೆ.
ನಿಂಗವ್ವ, ರೈತ ಮುಖಂಡರು
0 ಕಾಮೆಂಟ್‌ಗಳು