ಮೈಸೂರಿನ ಭಾರತೀಯ ಜೀವವಿಮಾ ನಿಗಮ ಬ್ರ್ಯಾಂಚ್-2, ಲಿಯಾಫಿ-1964 ಜೀವವಿಮಾ ಪ್ರತಿನಿಧಿಗಳ ಬೃಹತ್ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ  


ಮೈಸೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರು ಭಾರತೀಯ ಜೀವ ವಿಮಾ ನಿಗಮ ಬ್ಯಾಂಚ್-2, ಲಿಯಾಫಿ-1964 ವಿಮಾ ಪ್ರತಿನಿಧಿಗಳು ಸೋಮವಾರ ಕಚೇರಿ ಆವಚರಣದಲ್ಲಿ ಬೃಹತ್ ಹಕ್ಕೊತ್ತಾಯದ ಧರಣಿ ನಡೆಸಿದರು.

ಕಚೇರಿ ಪ್ರವೇಶ ದ್ವಾರದಲ್ಲಿ ಜಮಾಯಿಸಿದ ನೂರಾರು ವಿಮಾ ಪ್ರತಿನಿಧಿಗಳು ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಝೋನಲ್ ಉಪಾಧ್ಯಕ್ಷರಾದ ಡಿ.ಪುಟ್ಟಸ್ವಾಮಿ ಮಾತನಾಡಿ, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನಮ್ಮ ನ್ಯಾಯಯುತ ಬೇಡಿಕೆಗಳು, ಹಕ್ಕುಗಳನ್ನು ಕೋರಿ ಧರಣಿ ನಡೆಸುತ್ತಿದ್ದೇವೆ. ಭಾರತೀಯ ಜೀವ ವಿಮಾ ನಿಗಮವು ಇತ್ತೀಚೆಗೆ ಪ್ರತಿನಿಧಿಗಳಿಗೆ ನೀಡುತ್ತಿರುವ ಕಮೀಷನ್ ದರವನ್ನು ಕಡಿಮೆ ಮಾಡಿದೆ. ಇದರಿಂದ ಲಕ್ಷಾಂತರ ಪ್ರತಿನಿಧಿಗಳು ಸಂಕಷ್ಟಕ್ಕೆ ಈಡಾಗುತ್ತಾರೆ. ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿರುವ ಇಂತಹ ದಿನಮಾನಗಳಲ್ಲಿ ಕಮೀಷನ್ ದರವನ್ನು ಹೆಚ್ಚಳ ಮಾಡುವ ಬದಲು ಕಡಿಮೆ ಮಾಡಿರುವುದು ಅನ್ಯಾಯ ಕೂಡಲೇ ಕಮಿಷನ್ ದರವನ್ನು ಹೆಚ್ಚಿಸಬೇಕು ಅಥವಾ ಯಥಾಸ್ಥಿತಿ ಕಾಪಾಡಬೇಕು. ಹಳೆಯ ಆಯೋಗದ ದರಗಳನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿದರು.

ಅಲ್ಲದೇ ಪಾಲಿಸಿದಾರರ ಬೋನಸ್ ದರವನ್ನು ಈ ಕೂಡಲೇ ಹೆಚ್ಚಿಸಬೇಕು. ಇದರಿಂದ ಪಾಲಿಸಿದಾರರು ಮತ್ತಷ್ಟು ಹೊಸಬರಿಗೆ ಪ್ರೇರಣೆಯಾಗಲಿದ್ದಾರೆ ಎಂದರು.

ಬ್ರ್ಯಾಂಚ್ -2 ಅಧ್ಯಕ್ಷರಾದ ಎಂ.ಪ್ರಭಾಕರ್ ಮಾತನಾಡಿ, ಈ ಹಿಂದೆ ಸಮ್ ಅಶ್ಯೂರ್ಡ್ (ಭರವಸೆಯ ಮೊತ್ತ) ಒಂದು ಲಕ್ಷ ರೂ. ಇತ್ತು. ಇದೀಗ ಅದನ್ನು 2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಕನಿಷ್ಠ ಆದಾಯವುಳ್ಳ ಜನರು ವಿಮಾ ಪಾಲಿಸಿ ಮಾಡಲು ಕಷ್ಟವಾಗುತ್ತದೆ.  ನಿಗಮವು ಕೂಡಲೇ ಈ ಹಿಂದೆ ಇದ್ದ ಕನಿಷ್ಠ ಒಂದು ಲಕ್ಷ ರೂ. ಮೊತ್ತದ ಭರವಸೆಯನ್ನು ಮರುಸ್ಥಾಪಿಸಬೇಕು. ಅಲ್ಲದೇ ಪಾಲಿಸಿದಾರರು ಒಂದು ವರ್ಷಕ್ಕೆ ವಿಮೆ ವಾಪಸ್ ಪಡೆದಲ್ಲಿ ಕಮೀಷನ್ ಕ್ಲಾ ಬ್ಯಾಕ್ ಮಾಡುವ ಪದ್ದತಿ ಜಾರಿ ಮಾಡಲಾಗಿದೆ ಇದನ್ನು ವಿಮಾ ಪ್ರತಿನಿಧಿಗಳು ಸಂಪೂರ್ಣವಾಗಿ ವಿರೋಧಿಸುತ್ತಿದ್ದು ಕೂಡಲೇ ಈ ಪದ್ದತಿಯನ್ನು ಸ್ಥಗಿತ ಮಾಡಬೇಕು. ಅಲ್ಲದೇ ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರೀಮಿಯಂ ದರವನ್ನೂ ಸಹ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.

ಧರಣಿಯಲ್ಲಿ ನೂರಾರು ವಿಮಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬ್ರ್ಯಾಂಚ್-2 ಸಂಘಟನೆಯ ಎಸ್.ಸತೀಶ್, ಖಜಾಂಚಿ ಎಲ್.ಪ್ರಸಾದ್ ಸೇರಿದಂತೆ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು