ಜಮಾನ ಚಲನಚಿತ್ರ ಖ್ಯಾತಿಯ ಎಸ್.ಜಯಪ್ರಕಾಶ್ (ಜೆಪಿ) ನಟಿಸಿರುವ ಭಗೀರಥ ಚಲನ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ

ಕನ್ನಡ ಚಿತ್ರರಂಗದಲ್ಲಿ ಕಾವೇರಿ ಹೋರಾಟಗಾರನ ’ಭಗೀರಥ’ಪ್ರಯತ್ನ


ಮೈಸೂರು : ಜಮಾನ ಚಲನ ಚಿತ್ರದ ನಾಯಕ ನಟ  ಎಸ್.ಜಯಪ್ರಕಾಶ್ (ಜೆಪಿ) ನಟಿಸಿರುವ ’ಭಗೀರಥ’ ಕನ್ನಡ ಚಲನ ಚಿತ್ರದ ಪೋಸ್ಟರ್ ಬಿಡುಗಡೆ ಮತ್ತು ಆಟೋಗಳಿಗೆ ಪೋಸ್ಟರ್ ಅಂಟಿಸುವ ಕಾರ್ಯಕ್ರಮ ಭಾನುವಾರ ಬೆಳಗ್ಗೆ ಅಗ್ರಹಾರದ ನೂರೊಂದು ಗಣಪತಿ ದೇವಾಲಯದ ಬಳಿ ಸಂಭ್ರಮದಿಂದ ನಡೆಯಿತು.

ಮೈಸೂರಿನ ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಚಲನಚಿತ್ರ ರಂಗಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಣ್ಯರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮೈಸೂರಿನವರೇ ಆದ ಚಲನಚಿತ್ರ ನಟ, ಕಾವೇರಿ ಹೋರಾಟಗಾರ ಜೆಪಿ ಎಂದೇ ತಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಜಯಪ್ರಕಾಶ್ ಅವರನ್ನು ಪ್ರೋತ್ಸಾಹಿಸಿದ್ದು, ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮೈಸೂರಿನ ಹೆಸರಾಂತ ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅವರು ಮಾತನಾಡಿ, ಆತ್ಮ ವಿಶ್ವಾಸದ ಕೊರತೆ ಇರುವ ಇಂದಿನ ಯುವಕ, ಯುವತಿಯರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿ, ಅವರಲ್ಲಿ ಧೈರ್ಯ, ಬದುಕುವ ಛಲ, ಸಾಧನೆಯ ಬಲ ತುಂಬುವ ಕೌಟುಂಬಿಕ ಕಥಾ ಹಂದರವುಳ್ಳ ’ಭಗೀರಥ’ ಕನ್ನಡಚಲನ ಚಿತ್ರ ಶೀಘ್ರದಲ್ಲೆ ನಾಡಿನಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಸೊಗಸಾಗಿದೆ. ಜೆಪಿ ಒಬ್ಬ ಪಳಗಿದ ನಟನಂತೆ ನಟಿಸಿದ್ದಾರೆ. ಅಲ್ಲದೇ ಚಿತ್ರದಲ್ಲಿ ನಾಯಕ ನಟಿ ಚಂದನಾ ಬಾಲರಾಜು ಸಹ ಉತ್ತಮವಾಗಿ ನಟಿಸಿದ್ದಾರೆ. ರವಿ ಕಾಳೆ, ಸುಧಾ ಬೆಳವಾಡಿ, ಕೆಆರ್ ಪೇಟೆ ಶಿವರಾಜು ಅವರಂತಹ ಉತ್ತಮ ಪೋಷಕ ನಟ ನಟಿಯರು ನಟಿಸಿದಂತಹ ಭಗೀರಥ ಚಲನಚಿತ್ರ ಕನ್ನಡಿಗರ ಮನಸ್ಸು ಗೆಲ್ಲಲಿ, ಶತದಿನೋತ್ಸವ ಆಚರಿಸಲಿ ಎಂದು ಹರಸಿದರು.


ಯುವಕ, ಯುವತಿಯರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ಸಂದೇಶ ಕೊಡುವ ’ಭಗೀರಥ’

ಪೋಸ್ಟರ್ ಬಿಡುಗಡೆ ಮಾಡಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅವರು ಮಾತನಾಡಿ, 

ಇಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುವುದೇ ಒಂದು ಸಾಹಸದ ಕೆಲಸ. ಅದ್ದೂರಿ ಬಜೆಟ್‌ಗಳ ಲಾಂಗು, ಮಚ್ಚು ಹಿಡಿದು ಮಾರಾಮಾರಿ ನಡೆಸುವ ಕತೆಯುಳ್ಳ ಚಿತ್ರಗಳ ನಡುವೆ ಸಾಮಾಜಿಕ ಮೌಲ್ಯಗಳನ್ನು ಬಿತ್ತುವ, ನೈತಿಕತೆಯ ಪಾಠವನ್ನು ಹೇಳುವ, ಯುವಕ ಯುವತಿಯರಲ್ಲಿ ಆತ್ಮವಿಶ್ವಾಸ ತುಂಬುವ ಸಾಂಸಾರಿಕ ಕತೆಯುಳ್ಳ ’ಭಗೀರಥ’ ಚಲನಚಿತ್ರ ಅಧೋಗತಿಗೆ ಇಳಿದಿರುವ ಕನ್ನಡ ಚಿತ್ರರಂಗಕ್ಕೆ ಟಾನಿಕ್ ನೀಡಿದಂತಾಗಿದೆ. ಗೌರಿ ಗಣೇಶ ಹಬ್ಬದ ಮರುದಿನವೇ ಮೈಸೂರಿನಲ್ಲಿ ಕನ್ನಡ ಚಲನ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿರುವುದು ಸಾಂಸ್ಕೃತಿಕ ನಗರಿಯ ಹೆಮ್ಮೆ ಹೆಚ್ಚಿಸಿದೆ. ವರ್ಷಾನುಗಟ್ಟಲೇ ಕಾವೇರಿ ನೀರಿನ ಪರ ಹೋರಾಟ ನಡೆಸಿದ ಜೆಪಿ ಅವರನ್ನು ಕನ್ನಡಿಗರು, ಕನ್ನಡಪರ ಹೋರಾಟಗಾರರು, ಕಾವೇರಿ ಹೋರಾಟಗಾರರು ಭಗೀರಥ ಚಿತ್ರವನ್ನು ಚಲನಚಿತ್ರ ಮಂದಿರಗಳಲ್ಲಿ ನೋಡುವುದರ ಮೂಲಕ ಅವರನ್ನು ಗೆಲ್ಲಿಸಬೇಕಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಾಯಕ ನಟ ಜಯಪ್ರಕಾಶ್(ಜೆಪಿ), ಚಿತ್ರದ ನಿರ್ಮಾಪಕರಾದ ಕೆ.ರಮೇಶ್, ಬಿ.ಬೈರಪ್ಪ, ಚೇತನ್ ಎಸ್.ರಮೇಶ್, ಪಾರ್ಥಸಾರಥಿ, ಚಂದ್ರಶೇಖರ್, ಪ್ರದೀಪ, ಮಹೇಶ್ ಗೌಡ ಮುಂತಾದವರು ಇದ್ದರು. 

ಕಾರ್ಯಕ್ರಮಕ್ಕೂ ಮುನ್ನ ಭಗೀರಥ ಚಿತ್ರದ ನಾಯಕ ನಟ ಜಯಪ್ರಕಾಶ್ ಮತ್ತು ಚಿತ್ರದ ನಿರ್ಮಾಪಕರು ನೂರೊಂದು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು