ಟೆರೀಷಿಯನ್ ಕಾಲೇಜಿನಿಂದ ಜಿಲ್ಲಾಧಿಕಾರಿಗಳಕಚೇರಿ ತನಕ ಮೆರವಣಿಗೆ, ಡಿಸಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ
ಮೈಸೂರು : ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಕೂಡಲೇ ರಾಜ್ಯ ಸರ್ಕಾರ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾಧ್ಯಕ್ಷ ಶಂಕರ್ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಸೋಮವಾರ ಬೆಳಗ್ಗೆ 11.30ಕ್ಕೆ ಸಿದ್ಧಾರ್ಥ ನಗರದ ಬಳಿಯ ಟೆರೀಷಿಯನ್ ಕಾಲೇಜಿನಿಂದ ಕಾಲ್ನಡಿಗೆ ಮೆರವಣಿಗೆ ಮೂಲಕ ಘೋಷಣೆ ಕೂಗುತ್ತಾ ಹೊರಟ ಪ್ರತಿಭಟನಾಕಾರರು ಕೆಲಕಾಲ ಟೆರೀಷಿಯನ್ ಕಾಲೇಜು ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ರಸ್ತೆ ಬಂದ್ ಮಾಡಿ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ನಂತರ ವಿವಿಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ರಾಜ್ಯ ಸರ್ಕಾರದ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾಧ್ಯಕ್ಷ ಶಂಕರ್ ಮಾತನಾಡಿ,
‘ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಪರಿಶಿಷ್ಟರ ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಪರಿಶಿಷ್ಟರ ಮಿಸಲಾತಿ ವರ್ಗೀಕರಣವನ್ನು ಆದಷ್ಟು ಬೇಗ ಜಾರಿ ಮಾಡಬೇಕು.
ಪರಿಶಿಷ್ಟ ಜನಾಂಗದ 101 ಜಾತಿಗಳಲ್ಲಿ ಮೀಸಲಾತಿ ಸಮನಾಗಿ ಹಂಚಿಕೆಯಾಗಿಲ್ಲ ಎಂಬ ಆತಂಕ ಹಾಗೂ ಅಸಹನೆಯಿಂದ 30 ದಶಕಗಳಿಂದ ರಾಜ್ಯಾದ್ಯಂತ ನಿರಂತರವಾಗಿ ಹೋರಾಟಗಳು ನಡೆಯುತ್ತಿದೆ. ಹೋರಾಟದಲ್ಲಿ ಹಲವಾರು ಹೋರಾಟಗಾರರು ಜೀವ, ಜೀವನ ಹಾಗೂ ಬದುಕನ್ನೇ ಕಳೆದುಕೊಂಡಿದ್ದಾರೆ.
ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಮಾಡಲು ಕರ್ನಾಟಕ, ಆಂದ್ರ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಹೋರಾಟಗಳ ಹಿನ್ನಲೆಯಲ್ಲಿ ಹತ್ತಾರು ರಾಜ್ಯ ಸರ್ಕಾರಗಳು ರಚಿಸಿದ ಹಲವಾರು ಆಯೋಗಗಳು ನೀಡಿದ ವರದಿಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟಿನ ನ್ಯಾಯಾದೀಶರ ಸಂವಿಧಾನ ಪೀಠ ಆ.1 ರಂದು ಐತಿಹಾಸಿಕ ತೀರ್ಪು ನೀಡಿ ಈ ವಿವಾದಕ್ಕೆ ತೆರೆ ಎಳೆದಿದೆ. ಆದರೂ ರಾಜ್ಯ ಸರ್ಕಾರ ಒಳಮೀಸಲಾತಿ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‍ನ 7 ನ್ಯಾಯಾಧೀಶರ ಪೀಠ ನೀಡಿದ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನ ಮಾಡಬೇಕು. 2023-24 ಮತ್ತು 2024-25 ನೇ ಸಾಲಿನಲ್ಲಿ 25,391 ಕೋಟಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್‍ಸಿ ಎಸ್‍ಪಿ, ಟಿಎಸ್‍ಪಿ ಹಣವನ್ನು ಸರ್ಕಾರಗಳು ದುರ್ಬಳಕೆ ಮಾಡಿಕೊಂಡಿವೆ ಇದನ್ನು ಈ ಸಮಾಜದ ಅಭಿವೃದ್ಧಿಗೆ ವಾಪಸ್ ನೀಡಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸ್ಥಗಿತ ಮಾಡಲಾಗಿದ್ದು, ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶ ವ್ಯಾಸಂಗದ ಪ್ರಬುದ್ಧ ಯೋಜನೆ ರದ್ದು ಮಾಡಿದೆ. ಪುನಃ ಆರಂಭಿಸಬೇಕು. ಪರಿಶಿಷ್ಟರ ಮೀಸಲಾತಿ ವರ್ಗೀಕರಣವಾಗುವವರೆಗೂ ಸರ್ಕಾರ ಎಲ್ಲಾ ಸರ್ಕಾರ ನೇಮಕ ಮಾಡಲಿರುವ ಹುದ್ದೆಗಳ ನೇಮಕಾತಿಗಳನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾಧ್ಯಕ್ಷ ಶಂಕರ್, ಸ್ವಾಮಿನಾಥನ್, ಮಣಿಕಂಠ, ಎಚ್.ವಿ.ನಾಗರಾಜ್, ಬಲ್ಲಯ್ಯ, ರಾಯನಹಳ್ಳಿ ಸ್ವಾಮಿ, ಗಿರೀಶ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು