ಕೆಆರ್‌ಎಸ್ ಬಳಿ ರೇವ್‌ಪಾರ್ಟಿ: ಪೊಲೀಸ್ ಅಬಕಾರಿ ಇಲಾಖೆ ವೈಫಲ್ಯ, ಅಧಿಕಾರಿಗಳ ಅಮಾನತಿಗೆ ರೈತಸಂಘ ಆಗ್ರಹ

ನಾಡಹಬ್ಬ ದಸರಾ ಸಂದರ್ಭದಲ್ಲಿ ಅಬಕಾರಿ ಇಲಾಖೆಯಿಂದಲೇ ಮೈಸೂರಿಗೆ ಕೆಟ್ಟ ಹೆಸರು: ಆರೋಪ 

 ಮೈಸೂರು : ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಕಪ್ಪುಚುಕ್ಕೆ ಇಡುವಂತೆ ಕೃಷ್ಣರಾಜಸಾಗರ ಜಲಾಶಯದ (ಕೆಆರ್‌ಎಸ್) ಹಿನ್ನೀರು, ಮೀನಾಕ್ಷಿಪುರ ಬಳಿ ರೇವ್‌ಪಾರ್ಟಿ ನಡೆದಿದ್ದು, ಇದಕ್ಕೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಎಂದು ಕರ್ನಾಟಕ ರಾಜ್ಯ ರೈತಸಂಘದ (ರೈತಬಣ) ಅಧ್ಯಕ್ಷ ಇಂಗಲಗುಪ್ಪೆಕೃಷ್ಣೇಗೌಡ ಆರೋಪಿಸಿದ್ದಾರೆ.

ಮಾಧ್ಯಮದವರೊಂದಿಗೆ ಅವರು ಮಾತನಾಡಿ, 

ಕೂಡಲೇ ಸರ್ಕಾರ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇಟ್ಟು ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಪ್ರಾರಂಭವಾಗಿದೆ. ಲಕ್ಷಾಂತರ ಪ್ರವಾಸಿಗರು ಮೈಸೂರು ನಗರಕ್ಕೆ ಆಗಮಿಸುತ್ತಿದ್ದಾರೆ. ಮೈಸೂರು ಒಂದು ಸಾಂಸ್ಕೃತಿಕ ನಗರಿ ಎಂದು ದೇಶದೆಲ್ಲೆಡೆ ಪ್ರಖ್ಯಾತಿಗಳಿಸಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರು ತಲೆ ತಗ್ಗಿಸುವಂತಹ ನಿಷೇಧಿತ ರೇವ್‌ಪಾರ್ಟಿ ಅಕ್ರಮವಾಗಿ ಕೆಆರ್‌ಎಸ್ ಹಿನ್ನೀರಿನ ಮೀನಾಕ್ಷಿಪುರದ ಬಳಿ ನಡೆದಿರುವುದು ನಾಚಿಕೆಗೇಡು. ಈ ಘಟನೆಗೆ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ಡಿಸಿ, ಉಪ ಆಯುಕ್ತ, ಡಿವೈಎಸ್‌ಪಿ, ಸಂಬಂಧಪಟ್ಟ ಇನ್ಸ್‌ಪೆಕ್ಟರ್ ಅವರುಗಳ ಪರೋಕ್ಷ ಸಹಕಾರವಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಪೊಲೀಸ್ ಗುಪ್ತಚಾರ ಇಲಾಖೆಯ ವೈಫಲ್ಯವೂ ಎದ್ದು ಕಾಣುತ್ತಿದೆ. ಅಥವಾ ಇವರೆಲ್ಲರೂ ಈ ಅಕ್ರಮ ರೇವ್‌ಪಾರ್ಟಿಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ ಎಂಬುದು ಎಲ್ಲರ ಅಭಿಪ್ರಾಯವಾಗಿದ್ದು, ಸರ್ಕಾರಕ್ಕೆ ಮೈಸೂರು ದಸರಾ ಬಗ್ಗೆ ಕಿಂಚಿತ್ತು ಗೌರವ ಇದ್ದರೆ ಕೂಡಲೇ ಇವರೆಲ್ಲರನ್ನೂ ಅಮಾನತ್ತು ಮಾಡಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರಾದ ಮೈಸೂರು ನಗರ ಇಂದು ದೇಶದಲ್ಲೇ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ಮೂಲಕ ಶಿಕ್ಷಣಕಾಶಿ ಎನಿಸಿದೆ. ದೇಶ ವಿದೇಶಗಳಿಂದ ಬಂದ ಲಕ್ಷಾಂತರ ಯವ ಜನತೆ ಮೈಸೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ನಗರದಲ್ಲಿ ಡ್ರಗ್ಸ್ ಮಾರಾಟ, ರೇವ್‌ಮಾರ್ಟಿ ನಡೆದಿರುವುದು ಮೈಸೂರು ನಗರಕ್ಕೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ಇಲ್ಲಿ ಅಪಾರ ಪ್ರಮಾಣದ ಮದ್ಯ, ಗಾಂಜಾ, ಅಫೀಮು ಮುಂತಾದ ನಿಷೇಧಿತ ಡ್ರಗ್ಸ್‌ಗಳನ್ನು ಬಳಕೆ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆದುದರಿಂದ ಸರ್ಕಾರ, ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಿ ತನಿಖೆಗೆ ಆದೇಶಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು