ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾಗಿ ಎಂ.ರಸೂಲ್ ಅಧಿಕಾರ ಸ್ವೀಕಾರ


 ಮೈಸೂರು : ನಗರ ಜಿಲ್ಲಾ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾಗಿ ಯುವ ಕಾಂಗ್ರೆಸ್ ಮುಖಂಡ ಎಂ.ರಸೂಲ್ ಅಧಿಕಾರ ಸ್ವೀಕರಿಸಿದರು.

ಶನಿವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಾವಿರಾರು ಬೀದಿ ಬದಿ ವ್ಯಾಪಾರಿಗಳ ಸಮ್ಮುಖದಲ್ಲಿ ರಾಜ್ಯಾಧ್ಯಕ್ಷ ಡಾ.ರಂಗಸ್ವಾಮಿ ಅವರಿಂದ ಕಾಂಗ್ರೆಸ್ ಪಕ್ಷದ ಬಾವುಟ ಪಡೆಯುವುದರ ಮೂಲಕ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಡಾ.ರಂಗಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. ನಮ್ಮದು ಬಹುದೊಡ್ಡ ಸಂಘಟನೆ, ಯಾವುದೇ ಅಸ್ತಿತ್ವ, ರಕ್ಷಣೆ ಇಲ್ಲದ ಬೀದಿ ಬದಿ ವ್ಯಾಪಾರಿಗಳಿಗೆ ಅಂದು ಪ್ರಧಾನಿಗಳಾಗಿದ್ದ ಡಾ.ಮನಮೋಹನ್ ಸಿಂಗ್ ಅವರು ಸ್ಥಾನಮಾನ ಕಲ್ಪಿಸಿ ಗೌರವದ ಬದುಕು ನಡೆಸಲು ಕಾನೂನು ರೂಪಿಸಿದರು. ಇಂದು ದೇಶದ ಎಲ್ಲ ಬೀದಿ ಬದಿಯ ವ್ಯಾಪಾರಿಗಳು ಡಾ.ಮನಮೋಹನ್ ಸಿಂಗ್ ಅವರನ್ನು ನೆನಪಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಿವಣ್ಣ ಮಾತನಾಡಿ, ರಸೂಲ್ ಒಬ್ಬ ಹುಟ್ಟು ಹೋರಾಟಗಾರ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಬೀದಿ ಬದಿಯ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾಗಿ ನೇಮಕವಾಗಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.

ನಗರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿನ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಸಂಘಟನೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಸೂಲ್ ಸಂಘಟನೆ ಬಲಪಡಿಸಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಲಿದ್ದಾರೆ ಎಂದರು.

ಮೈಸೂರು ನಗರ, ಜಿಲ್ಲಾ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ನೂತನ ಅಧ್ಯಕ್ಷ ಎಂ.ರಸೂಲ್ ಮಾತನಾಡಿ, ಇಂದಿನಿಂದಲೇ ಪಕ್ಷದ ಸಂಘಟನೆಗೆ ಮುಂದಾಗುತ್ತೇನೆ. ದಿನನಿತ್ಯ ಬೀದಿ ಬದಿ ವ್ಯಾಪಾರಿಗಳ ನೋವು, ನಲಿವುಗಳಿಗೆ ಸ್ಪಂದಿಸಿ ಅವರನ್ನು ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.

ಪದಗ್ರಹಣ ಸಮಾರಂಭದಲ್ಲಿ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಈಶ್ವರ ಚಕ್ಕಡಿ, ಅಜೀಜ್ ಸೇಠ್ ಬ್ಲಾಕ್ ಅಧ್ಯಕ್ಷ ಸೈಯದ್ ಎಕ್ಬಾಲ್, ಶೌಕತ್, ಅಫ್ರೋಜ್ ಮತ್ತಿತರರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ತಮಟೆ ವಾದ್ಯಗಳ ಭಾರಿ ಸದ್ದಿನೊಂದಿಗೆ ಪುಷ್ಪಾರ್ಚನೆ ಮೂಲಕ ಗಣ್ಯರನ್ನು ವೇದಿಕೆಗೆ ಕರೆತರಲಾಯಿತು.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು