ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೈತಿಕತೆ ಪ್ರಶ್ನಿಸುವ ಬಿಜೆಪಿಗರೇ ನಿರ್ಮಲಾ ಸೀತಾರಾಮನ್ ನೈತಿಕತೆ ಪ್ರಶ್ನಿಸಿ: ಹಿರಿಯ ವಕೀಲ ಪುಟ್ಟಸಿದ್ದೇಗೌಡ


 ಮೈಸೂರು : ಚುನಾವಣಾ ಬಾಂಡ್ ಮೂಲಕ ಕೋಟ್ಯಾಂತರ ಹಣ ಲೂಟಿ ಮಾಡಿದ ಆರೋಪ ಹೊತ್ತಿರುವ ಕೇಂದ್ರ ಸರ್ಕಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶಿಸಿದ್ದು, ಇದುವರೆಗೂ ಸಿಎಂ ಸಿದ್ದರಾಮಯ್ಯ ಅವರ ನೈತಿಕತೆ ಪ್ರಶ್ನಿಸುತ್ತಿದ್ದ ಬಿಜೆಪಿಗರು ಈಗ ಬಾಯಿ ಮುಚ್ಚಿಕೊಂಡಿದ್ದಾರೆ, ನೀವು ನಿರ್ಮಲಾ ಸೀತಾರಾಮನ್ ಅವರ ನೈತಿಕತೆ ಪ್ರಶ್ನಿಸುವುದಿಲ್ಲವೇ? ಎಂದು ಪ್ರಗತಿಪರ ವಕೀಲರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಪುಟ್ಟಸಿದ್ದೇಗೌಡ ವ್ಯಂಗ್ಯವಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾತೆತ್ತಿದರೆ ಸಿಎಂ ರಾಜೀನಾಮೆ ಕೇಳುವ ಎಲ್ಲ ಬಿಜೆಪಿ ನಾಯಕರ ವಿರುದ್ಧವೂ ಹತ್ತಾರು ಪ್ರಕರಣಗಳಿವೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದವರು.ಈಗ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ವಿಜಯೇಂದ್ರ ಚೆಕ್ ಮೂಲಕ ಲಂಚ ಪಡೆದಿದ್ದಾರೆ. ಕುಮಾರಸ್ವಾಮಿ ನಿನ್ನೆಯಷ್ಟೇ ಗಂಗೇನಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಸಿಟಿ ರವಿ, ಆರ್.ಅಶೋಕ ಇವೆರಲ್ಲರೂ ಸಾಚಾಗಳಾ..ಇವರ ವಿರುದ್ಧ ಪ್ರಕರಣಗಳಿಲ್ಲವೇ? ಇವರೆಲ್ಲಾ ನೈತಿಕತೆ ಹೊಣೆ ಹೊತ್ತು ರಾಜಕಾರಣದಿಂದ ದೂರ ಉಳಿದಿದ್ದಾರಾ..ಎಂದು ಪುಟ್ಟಸಿದ್ದೇಗೌಡ ಪ್ರಶ್ನಿಸಿದರು. 

ನೈತಿಕತೆ ಇದ್ದವರು ಮಾತ್ರ ಇನ್ನೊಬ್ಬರ ನೈತಿಕತೆ ಪ್ರಶ್ನಿಸುವ ಹಕ್ಕನ್ನು ಹೊಂದಿರುತ್ತಾರೆ. 

ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡುವವರು ತಮ್ಮ ನೈತಿಕತೆ ಏನು ಎಂದು ತಮ್ಮ ಆತ್ಮವನ್ನು ಒಮ್ಮೆ ಪ್ರಶ್ನಿಸಿಕೊಳ್ಳಿ. ಬಿಜೆಪಿ, ಜೆಡಿಎಸ್ ಪಕ್ಷದ ಯಾವ ರಾಜಕಾರಣಿಗಳು ಇಂದು ನೈತಿಕತೆ ಉಳಿಸಿಕೊಂಡಿದ್ದಾರೆ? 

ಸೆಬಿ ಅಧ್ಯಕ್ಷರೇ ಅಕ್ರಮವಾಗಿ ಅಂಬಾನಿ, ಅದಾನಿ ಕಂಪನಿಗಳಲ್ಲಿ ನಿಯಮಬಾಹಿರವಾಗಿ ಷೇರುಗಳನ್ನು ಹೊಂದಿರುವ ಬಗ್ಗೆ ಗಂಭೀರ ಆರೋಪವಿದೆ. ಈ ವಿಷಯವಾಗಿ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಹಣಕಾಸು ಸಚಿವರು ರಾಜಿನಾಮೆ ಕೊಡುತ್ತಾರೆಯೇ? ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರ ಮಾತಿಗೆ ಯಾವುದೇ ಕಿಮ್ಮತ್ತು ಇರುವುದಿಲ್ಲ. ಇವರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯು ಇರುವುದಿಲ್ಲ ಎಂದು ಹೇಳಿದರು.

ಬಿಜೆಪಿ ಆಡಳಿತ ಇರುವ ಗುಜರಾತ್, ರಾಜಸ್ತಾನ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ರಾಜ್ಯಪಾಲರ ಸದ್ದು ಇಲ್ಲ.. ಸುದ್ದಿನೂ ಇಲ್ಲ. ಬಿಜೆಪಿಯೇತರ ಸರ್ಕಾರಗಳಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಕರ್ನಾಟಕ ಮುಂತಾದ ಕಡೆ ರಾಜ್ಯಪಾಲರುಗಳು ಚುನಾಯಿತ ಸರ್ಕಾರಗಳನ್ನು ದಿನನಿತ್ಯ ಪ್ರಶ್ನಿಸುತ್ತಿರುವುದು ಕಂಡುಬಂದಿದೆ ಏಕೆ ಹೀಗೆ? ಇಡಿ, ಸಿಬಿಐ ಮೂಲಕ ಚುನಾಯಿತ ಸರ್ಕಾರಗಳನ್ನು ವಿರೋಧ ಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದ ಬಿಜೆಪಿ ಇದೀಗ ರಾಜಭವನ ಬಳಸಿಕೊಳ್ಳುತ್ತಿರುವ ಬಗ್ಗೆ ರಾಜ್ಯದ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಪುಟ್ಟಸಿದ್ದೇಗೌಡ ಕಿಡಿ ಕಾರಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದೆ ವಿರೋಧ ಪಕ್ಷಗಳಿಗೆ ರಾಜಕೀಯವಾಗಿಯೇ ಉತ್ತರ ನೀಡಿ ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕು, ಸಂವಿಧಾನದ ಪರ ಇರುವ ಎಲ್ಲರೂ ನಿಮ್ಮ ಬೆಂಬಲಕ್ಕಿದ್ದಾರೆ ಎಂದು ಸಿಎಂ ಅವರಲ್ಲಿ ಮನವಿ ಮಾಡಿದರು. 

ರಾಜ್ಯದಲ್ಲಿ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುವ ಮೂಲಕ ಅಭಿವೃದ್ಧಿ, ಜನಪರ ಕಾಳಜಿ ಹೊಂದಿದ ನಾಯಕನಾಗಿ ಹೊರಹೊಮ್ಮುತ್ತಿದ್ದು, ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳಬೇಡಿ. ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.

ಪ್ರದಾನ ಮಂತ್ರಿ ಮೋದಿಯವರಿಂದ ಹಿಡಿದು, ಬಿಜೆಪಿಯ ಎಲ್ಲಾ ನಾಯಕರುಗಳು ರಾಷ್ಟ್ರದಲ್ಲಿ ರಾಹುಲ್ ಗಾಂಧಿ, ರಾಜ್ಯದಲ್ಲಿ ಸಿದ್ದರಾಮಯ್ಯ ರವರನ್ನು ಗುರುಯಾಗಿಸಿಕೊಂಡು ಅವರನ್ನು ರಾಜಕೀಯವಾಗಿ ಮುಗಿಸಲು ಸಂವಿಧಾನತ್ಮಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದರ ಮೂಲಕ ಸಂಚು ನಡೆಸುತ್ತಿದ್ದು, ಈ ವಿಷಯಗಳನ್ನು ಆರಿತಿರುವ ದೇಶದ ಮತ್ತು ರಾಜ್ಯದ ಜನರು ಇವರ ವಿಚಾರಗಳ ಮೇಲೆ ಮತ್ತು ಸಂವಿಧಾನಾತ್ಮಕ ನಿಲುವುಗಳ ಮೇಲೆ ನಂಬಿಕೆ ಇಟ್ಟು, ಹೋರಾಟ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಅವರ ಜನಪ್ರಿಯತೆಗಳು ಸಹ ದಿನೇ ದಿನೇ ಹೆಚ್ಚುತ್ತಲೇ ಇದೆ. 

ಸಾಮಾಜಿಕ ನ್ಯಾಯದ ಪರ ಮತ್ತು ಸಂವಿಧಾನದ ಆಶಯದಂತೆ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ರವರುಗಳ ಚಿಂತನೆಯನ್ನು ತನ್ನ ರಾಜಕೀಯ ಜೀವನದುದ್ದಕ್ಕೂ ಮೈಗೂಡಿಸಿಕೊಂಡು ಬಂದಿರುವ ಸಿದ್ದರಾಮಯ್ಯನವರು ಕೋಮುವಾದಿಗಳ ಕುತಂತ್ರವನ್ನು ಧೈರ್ಯವಾಗಿ ಎದುರಿಸಿ ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಕೀಲರುಗಳಾದ ವಿಷ್ಣುವರ್ಧನ್, ಗಿರೀಶ್, ಚೌದರಿಶಂಕರ್.ಎಂ.ಎಸ್., ಸೋಮರಾಜು ಮತ್ತು ಅಂದಾನಿ.ಕೆ.ಎಸ್., ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು