ಮೈಸೂರು : ಕಳೆದ ವರ್ಷ ದೆಹಲಿಯಲ್ಲಿ ನಡೆದ ರೈತ ಸಂಘಟನೆಗಳ ಹೋರಾಟಕ್ಕೆ ಮಣಿದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದ ಕೇಂದ್ರ ಸರ್ಕಾರ ಮತ್ತೆ ಆ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಬೇಕೆಂದು ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ನಟಿ, ಸಂಸದೆ ಕಂಗನಾ ರಣಾವತ್ ಹೇಳಿಕೆಗೆ ರೈತಸಂಘ ಕೆಂಡಾಮಂಡಲವಾಗಿದ್ದು, ಕೂಡಲೇ ಕಂಗನಾ ದೇಶದ ರೈತರ ಕ್ಷಮೆ ಯಾಚಿಸಬೇಕು ಇಲ್ಲದಿದ್ದಲ್ಲಿ ಅವರ ಎಲ್ಲ ಚಿತ್ರಗಳನ್ನು ಬಹಿಷ್ಕರಿಸುತ್ತೇವೆ. ಮತ್ತು ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕೃಷಿ ಎಂದರೆ ಬಣ್ಣ ಹಚ್ಚಿಕೊಂಡು ಕುಣಿಯುವುದಲ್ಲ. ಅದೊಂದು ವರ್ಷಾನುಗಟ್ಟಲೆ ಮಾಡುವ ತಪಸ್ಸು, ರೈತರ ಈ ತಪಸ್ಸಿನ ಫಲದಿಂದ ನೀವು ಸೇರಿದಂತೆ ದೇಶದ ಜನರು ಊಟ ಮಾಡುತ್ತಿದ್ದಾರೆ. ಕೈಕೆಸರು ಮಾಡಿಕೊಂಡು, ಬಿಸಿಲು ಮಳೆ ಎನ್ನದೆ ಅನ್ನದಾತ ಹಗಲಿರುಳು ದುಡಿಯುತ್ತಾನೆ. ಅವರ ಕಷ್ಟ ನಿಮಗೇನು ಗೊತ್ತು ಎಂದು ಟೀಕಿಸಿರುವ ಅವರು ಕಂಗನಾ ರಣಾವತ್ ಅವರ ಸಂಸದರ ಸದಸ್ಯತ್ವವನ್ನು ಕೂಡಲೇ ಲೋಕಸಭಾ ಸ್ಪೀಕರ್ ಅವರು ರದ್ದು ಮಾಡಬೇಕು. ಇದು ಇಂತಹ ರೈತ ವಿರೋಧಿ ಹೇಳಿಕೆ ನೀಡುವವರಿಗೆ ಎಚ್ಚರಿಕೆಯ ಪಾಠವಾಗುತ್ತದೆ ಎಂದರು.
0 ಕಾಮೆಂಟ್‌ಗಳು