ಚಾಮುಂಡಿ ಬೆಟ್ಟದಲ್ಲಿ ಪೌರಕಾರ್ಮಿಕರ ಗುಡಿಸಲು ತೆರವು: ಟಿ.ಎಸ್.ಸುಬ್ಬಣ್ಣ ಪ್ರೌಢಶಾಲಾ ಶಿಕ್ಷಕರ ಕ್ರಮ ಖಂಡಿಸಿ ದಸಂಸ ಪ್ರತಿಭಟನೆ


 ಮೈಸೂರು : ಕಳೆದ ಹಲವು ವರ್ಷಗಳಿಂದ ತಮ್ಮ ಮೊಮ್ಮಗಳ ಜತೆ ವಾಸ ಮಾಡುತ್ತಿದ್ದ ವೃದ್ಧ ಪೌರ ಕಾರ್ಮಿಕರೊಬ್ಬರ ಕಲ್ನಾರ್ ಶೀಟಿನ ಗುಡಿಸಲನ್ನು ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಬಾಲಕೀಯರ ಪ್ರೌಢಶಾಲೆಯ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಏಕಾಏಕಿ ತೆರವು ಮಾಡಿದ್ದಾರೆಂದು ಆರೋಪಿಸಿ ಚಾಮುಂಡಿಬೆಟ್ಟದಲ್ಲಿ ಕರ್ನಾಟ ರಾಜ್ಯ ಆದಿ ದ್ರಾವಿಡ ಪೌರಕಾರ್ಮಿಕರ ಮಹಾಸಂಘದ ಗೌರವ ಕಾರ್ಯದರ್ಶಿ ಕೆ.ನಂಜಪ್ಪ ಬಸವನಗುಡಿ ಅವರ ನೇತೃತ್ವದಲ್ಲಿ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಮನೆ ಕಳೆದುಕೊಂಡ ವಯೋವೃದ್ಧೆ ಗೋಪಮ್ಮ ಮಾತನಾಡಿ, ನಾನು ಚಾಮುಂಡಿಬೆಟ್ಟದಲ್ಲಿ ಸ್ವೀಪರ್ ಕೆಲಸ ಮಾಡಿಕೊಂಡು ನಿವೃತ್ತಳಾಗಿದ್ದೇನೆ. ನನಗೆ ಮನೆ ಇಲ್ಲ. ಚಾಮುಂಡಿಬೆಟ್ಟದ ಸರ್ವೆ ನಂ.25ರಲ್ಲಿ ನಾವು ಹಲವು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದೇವೆ. ಮಳೆಯ ಕಾರಣ ಗುಡಿಸಲು ತೆರವು ಮಾಡಿ ಇಲ್ಲಿ ಕಲ್ನಾರ್ ಶೀಟಿನ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಕಳೆದ ಸೆ.18 ರಂದು ಇಲ್ಲಿನ ಶಾಲಾ ಶಿಕ್ಷಕರು ಏಕಾಏಕಿ ತಮ್ಮ ಶಾಲೆಯ ಹಲವಾರು ಹೆಣ್ಣು ಮಕ್ಕಳನ್ನು ಬಳಸಿಕೊಂಡು ಮನೆಯ ಮೇಲೆ ದಾಳಿ ನಡೆಸಿ ಮನೆಯನ್ನು ಸಂಪೂರ್ಣ ಕಿತ್ತು ಬೀಸಾಡಿದ್ದಾರೆ. ನನ್ನ ಮೊಮ್ಮಗಳಿಗೆ  4 ತಿಂಗಳ ಮತ್ತು 2 ವರ್ಷದ ಪುಟ್ಟ ಮಕ್ಕಳಿದ್ದಾರೆ. ವಯೋವೃದ್ಧೆ, ಬಾಣಂತಿ ಎನ್ನದೆ ಶಿಕ್ಷಕರು ನಮ್ಮನ್ನು ಬಲವಂತದಿಂದ ಮನೆಯಿಂದ ಹೊರದಬ್ಬಿ ಬೀದಿಗೆ ತಳ್ಳಿದ್ದಾರೆ. ನಮಗೆ ಮನೆ ಇಲ್ಲದ ಕಾರಣ ಮಕ್ಕಳ ಸಮೇತ ಬೀದಿ ಪಾಲಾಗಿದ್ದೇವೆ ಎಂದು ವಯೋವೃದ್ಧೆ ಗೋಪಮ್ಮ ಹೇಳಿದರು. 

ದಸಂಸ ಮುಖಂಡ ಕೆ.ನಂಜಪ್ಪ ಬಸವನಗುಡಿ ಮಾತನಾಡಿ, ಚಾಮುಂಡಿಬೆಟ್ಟದ ನೆಹರು ಪೌರಕಾರ್ಮಿಕರ ಕಾಲೂನಿಯಲ್ಲಿ ಕಳೆದ ಮೂರು ತಲೆಮಾರುಗಳಿಂದ ಹಲವು ಕುಟುಂಬಗಳು ವಾಸವಾಗಿವೆ. 110 ವರ್ಷಗಳ ಹಿಂದೆ ಅಂದಿನ ಮೈಸೂರಿನ ಮಹಾರಾಜರು ಚಾಮುಂಡಿಬೆಟ್ಟದ ಸ್ವಚ್ಛತೆಗಾಗಿ ಈ ಕುಟುಂಬಗಳನ್ನು ಇಲ್ಲಿ ನೆಲೆಸುವಂತೆ ಮಾಡಿದ್ದಾರೆ. ಇಲ್ಲಿ ಎಲ್ಲರ ಮನೆಗಳಿಗೂ ಹಕ್ಕುಪತ್ರ ನೀಡಲಾಗಿದೆ. ಕಂದಾಯವನ್ನೂ ಪಾವತಿಸಲಾಗುತ್ತಿದೆ. ಆದರೇ, ಕೆಲವು ವರ್ಷಗಳ ಹಿಂದೆ ಇಲ್ಲಿನ ಟ್ರಸ್ಟ್‍ನವರು ಅಕ್ರಮವಾಗಿ ಈ ಜಮೀನು ಖಾತೆ ಮಾಡಿಸಿಕೊಂಡು ಈಗ ಜಾಗ ನಮ್ಮದು ಎನ್ನುತ್ತಿದ್ದಾರೆ. ಈಗ ತೆರವು ಮಾಡಿರುವ ನಿವೇಶವೂ ಚಾಮುಂಡಿಬೆಟ್ಟ ಪಂಚಾಯ್ತಿಯ ಡಿಮ್ಯಾಂಡ್ ರಿಜಿಸ್ಟಾರ್‍ನಲ್ಲಿ ನಮೂದಾಗಿದೆ. ಆದರೇ, ಈಚೆಗೆ ಬಂದಿರುವ ಪಿಡಿಓ ಮಾತ್ರ ಈ ನಿವೇಶನಕ್ಕೆ ಕಂದಾಯ ಕಟ್ಟಿಸಿಕೊಂಡಿಲ್ಲ. 

ಯಾವುದೇ ಭೂ ವಿವಾದ ಇದ್ದರೆ ಅದನ್ನು ತೀರ್ಮಾನಿಸಲು ಕೋರ್ಟ್ ಇದೆ. ಆದರೇ, ಈ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಮನೆ ತೆರವಿಗೆ ಬಳಸಿಕೊಂಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೂ ಅವಮಾನ ಮಾಡಲಾಗಿದೆ. ಶಿಕ್ಷಕರೊಬ್ಬರು ಜಾತಿ ನಿಂದನೆಯನ್ನೂ ಮಾಡಿದ್ದಾರೆ

ಎಂದು ಆರೋಪಿಸಿದರು.

ಬಳಿಕ ಸ್ಥಳಕ್ಕೆ ಬಂದ ಶಾಲಾ ಶಿಕ್ಷಕರು ಮತ್ತು ಸ್ಥಳೀಯ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆಯಿತು. 

ಈ ಸಂದರ್ಭದಲ್ಲಿ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಿ.ಕೃಷ್ಣಮೂರ್ತಿ ಮಾತನಾಡಿ, ಸರ್ವೆ ನಂ.25 ರಲ್ಲಿ 3 ಎಕರೆ 15 ಕುಂಟೆ ಜಮೀನು ನಮ್ಮ ಶಾಲೆಯ ಟ್ರಸ್ಟ್‍ಗೆ ಸೇರಿದೆ. ಇಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಲಾಗಿತ್ತು. ನಮ್ಮ ಜಮೀನು ಕಾಪಾಡಿಕೊಳ್ಳಲು ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಶೆಡ್ ತೆರವು ಮಾಡಿದ್ದೇವೆ. ಅಂಬೇಡ್ಕರ್ ಭಾವಚಿತ್ರಕ್ಕೆ ಯಾವುದೇ ರೀತಿಯ ಅಪಮಾನ ಮಾಡಿಲ್ಲ ಎಂದರು.

ಈ ಸಂದರ್ಭದಲ್ಲಿ ಆದಿ ದ್ರಾವಿಡ ಮಹಾಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್, ದಸಂಸ ಮುಖಂಡ ಪ್ರಸನ್ನ, ರಾಮಕ್ಕ, ಸುಬ್ರಮಣಿ, ಗೋಪಾಲ್, ಬಾಬು ಮತ್ತಿತರರು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು