ಶಾಸಕ ಮುನಿರತ್ನ ವಿರುದ್ಧ ಮಂಡ್ಯದಲ್ಲಿ ದಸಂಸ (ಭೀಮವಾದ) ಬೃಹತ್ ಪ್ರತಿಭಟನೆ : ಶಾಸಕ ಸ್ಥಾನದಿಂದ ವಜಾ ಗೊಳಿಸಲು ಕೆ.ಎಂ. ಶ್ರೀನಿವಾಸ್ ಒತ್ತಾಯ


 ವರದಿ: ನಜೀರ್ ಅಹಮದ್

ಮಂಡ್ಯ : ಜಾತಿನಿಂದನೆ ಮತ್ತು ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಂಧಿಸಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿನ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ. ಶ್ರೀನಿವಾಸ್ ನೇತೃತ್ವದಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಮುನಿರತ್ನ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮೂಲಕ ವಿಧಾನಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. 

ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ. ಶ್ರೀನಿವಾಸ್ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಸಂಬಂಧಿಸಿದಂತೆ ಮುನಿರತ್ನ ಹಾಗೂ ಅವರ ಆಪ್ತ ವಸಂತ ಕುಮಾರ್ ಅವರು ಗುತ್ತಿಗೆದಾರ ಚಲುವರಾಜು ಅವರಿಂದ ೩೦ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರು ದೂರು ನೀಡಿದ್ದಾರೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆಡಿಯೊದಲ್ಲಿನ ಮುನಿರತ್ನ ಅವರ ಮಾತುಗಳು ಕೇವಲ ಅವರೊಬ್ಬರ ವೈಯಕ್ತಿಕ ಹೇಳಿಕೆಯಲ್ಲ, ಸಮಸ್ತ ಬಿಜೆಪಿಗರ ಮನಸ್ಥಿತಿಯ ಪ್ರತಿರೂಪ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಮಹಿಳಾ ಮತ್ತು ದಲಿತ ವಿರೋಧಿ ಶಾಸಕ ಮುನಿರತ್ನನನ್ನು ಕಿತ್ತೊಗೆಯಿರಿ, ಮುನಿರತ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಅಥವಾ ಅವರನ್ನು ವಜಾ ಮಾಡಿ ಗಡಿಪಾರು ಮಾಡಬೇಕೆಂದು ಹೇಳಿದರು.

ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ವಾಸ್ತವದಲ್ಲಿ ದಲಿತರನ್ನು, ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಅವರು ಆಡಿರುವ ಮಾತುಗಳೇ ಸಾಕ್ಷಿ. ಗುತ್ತಿಗೆದಾರರೊಬ್ಬರಿಗೆ ಕಮಿಷನ್ ಕಿರುಕುಳ ನೀಡುತ್ತ, ಅವಾಚ್ಯವಾಗಿ ಅವರ ತಾಯಿಯನ್ನು ನಿಂದಿಸುತ್ತ ಕೊಲೆ ಬೆದರಿಕೆ ಒಡ್ಡಿರುವುದು ಆಘಾತಕಾರಿ ವಿಚಾರ. ಇಂತಹ ಜನಪ್ರತಿನಿಧಿಗಳಿದ್ದರೆ ಗುತ್ತಿಗೆದಾರರು, ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಸಾಧ್ಯವೇ? ಎಂದು ಶ್ರೀನಿವಾಸ್ ಪ್ರಶ್ನಿಸಿದರು. 

ವೈರಲ್ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ, ಗುತ್ತಿಗೆದಾರನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇಂಥ ಭ್ರಷ್ಟ ಶಾಸಕನನ್ನು ಬಿಜೆಪಿಯು ಪಕ್ಷದಿಂದ ವಜಾಗೊಳಿಸಬೇಕು. ತಾಯಿಯ ಬಗ್ಗೆ ಹೇಯವಾಗಿ ಮಾತನಾಡಿರುವ ಮುನಿರತ್ನ ಜನಪ್ರತಿನಿಧಿಯಾಗಿ ಮುಂದುವರಿಯಲು ಅನರ್ಹರು. ಮುನಿರತ್ನ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಕುಮಾರ್, ಚನ್ನಕೇಶವ, ರವಿ ನರಹಳ್ಳಿ, ಹೆಚ್.ಎನ್.ಬಲರಾಂ, ಮಂಡ್ಯ ಕುಮಾರ್, ಸೋಮಶೇಖರ್ ಮೇನಾಗರ ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು