ವಿಶ್ವಕರ್ಮ ಸಮುದಾಯ ಶಿಕ್ಷಣಕ್ಕೆ ಮಹತ್ವ ನೀಡಬೇಕು : ಮಂಡಿಬೆಟ್ಟಹಳ್ಳಿ ಎನ್.ಬಸವರಾಜು ಸಲಹೆ

ಪಾಂಡವಪುರದಲ್ಲಿ ಅದ್ದೂರಿಯಾಗಿ ಜರುಗಿದ ’ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ’


 ಪಾಂಡವಪುರ : ವಿಶ್ವಕರ್ಮ ಸಮುದಾಯ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚು ಮಹತ್ವ ನೀಡುವ ಮೂಲಕ ಆರ್ಥಿಕ,  ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು ಎಂದು ವಿಶ್ವಕರ್ಮ ಕ್ಷೇಮಾಭಿವೃದ್ದಿ ಸಮಿತಿ ತಾಲೂಕು ಅಧ್ಯಕ್ಷ ಮಂಡಿಬೆಟ್ಟಹಳ್ಳಿ ಎನ್.ಬಸವರಾಜು ಹೇಳಿದರು.

ಪಟ್ಟಣದ ಶಾಂತಿನಗರದ ವಿಶ್ವಕರ್ಮ ಕ್ಷೇಮಾಭಿವೃದ್ದಿ ಸಮಿತಿ ಕಚೇರಿಯ ಆವರಣದಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದ ಬಹುಸಂಖ್ಯಾತ ಸಮುದಾಯಗಳಲ್ಲಿ ವಿಶ್ವಕರ್ಮ ಸಮುದಾಯವು ಒಂದಾಗಿದೆ. ರಾಜ್ಯದಲ್ಲಿ ೪೫ ಲಕ್ಷ ಜನಸಂಖ್ಯೆ ಇದ್ದರೂ, ನಮಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಹೆಚ್ಚೆಂದರೆ ಜಿಲ್ಲಾ ಪಂಚಾಯ್ತಿ ಸದಸ್ಯರ ಸ್ಥಾನ ಮಾತ್ರ ಸಿಕ್ಕಿದೆ. ಎಲ್ಲಾ ಪಕ್ಷದ ರಾಜಕೀಯ ನಾಯಕರು ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ಯಾವುದೇ ಅಭಿವೃದ್ದಿ ಕೆಲಸಗಳಿಗೂ ವಿಶ್ವಕರ್ಮ ಸಮುದಾಯದ ಸಹಕಾರ ಬೇಕಾಗಿದೆ. ಹೀಗಾಗಿ ಸಮುದಾಯದ ಜನರು ಸಂಘಟಿತರಾಗಬೇಕು, ಶಿಕ್ಷಣದ ಜತೆಗೆ ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಪ್ರಶ್ನಿಸಿ ಸವಲತ್ತು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

೧೯೮೮ ರಲ್ಲಿ ಪುರಸಭೆ ಅಧ್ಯಕ್ಷರಾಗಿದ್ದ ವೀರಭದ್ರಾಚಾರ್ ಅವರು ವಿಶ್ವಕರ್ಮ ಕ್ಷೇಮಾಭಿವೃದ್ದಿ ಸಮಿತಿಗೆ ಜಾಗ ಗುರುತಿಸಿ ಮಂಜೂರು ಮಾಡಿಸಿಕೊಟ್ಟಿದ್ದರು. ಇದೀಗ ಆ ಸ್ಥಳ ಸಮುದಾಯದ ಅಭಿವೃದ್ದಿಗೆ ಸಹಕಾರಿಯಾಗಿದೆ. ಸಂಘ-ಸಮಿತಿಗಳಿಗೆ ಅಧ್ಯಕ್ಷರು ಬರುತ್ತಾರೆ ಹೋಗುತ್ತಾರೆ ಆದರೆ ಬರುವ ಎಲ್ಲರು ಸಮುದಾಯದ ಅಭಿವೃದ್ದಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ನಾವು ಒಗ್ಗಟ್ಟಾದರೆ ಅಧಿಕಾರದ ಜತೆಗೆ ಸಮಾಜವನ್ನು ಅಭಿವೃದ್ಧಿಪಡಿಸಬಹುದು ಎಂದು ತಿಳಿಸಿದರು.

ಸರ್ಕಾರ ರಾಯಲ್ಟಿ ಕೊಡಬೇಕು : 

ಕಾರ್ಯಕ್ರಮದಲ್ಲಿ ಪ್ರದಾನ ಭಾಷಣ ಮಾಡಿದ ಕೊಡಗು ಜಿಲ್ಲೆಯ ಸತೀಶ್ ಮುರುಳಿ ಮಾತನಾಡಿ, ರಾಜ್ಯದಲ್ಲಿ ೩೫ ಸಾವಿರ ದೇವಾಲಯಗಳು ಮುಜರಾಯಿ ಇಲಾಖೆಗೆ ಸೇರಿದ್ದು, ಅವುಗಳಿಂದ ಸರ್ಕಾರಕ್ಕೆ ಕೊಟ್ಯಾಂತರ ರೂ.ಆದಾಯ ಬರುತ್ತಿದೆ. ಈ ದೇವಾಲಯಗಳ ವಾಸ್ತುಶಿಲ್ಪ, ಗರ್ಭಗುಡಿಯಲ್ಲಿರುವ ದೇವರ ಮೂರ್ತಿಗಳನ್ನು ವಿಶ್ವಕರ್ಮ ಸಮುದಾಯದವರು ಕೆತ್ತನೆ ಮಾಡಿದ್ದಾರೆ. ಹೀಗಾಗಿ ಈ ಸಮುದಾಯದ ಕೊಡುಗೆಯಿಂದ ಬಂದ ಹಣವನ್ನು ಸರ್ಕಾರ ಪ್ರತಿಯೊಂದು ವಿಶ್ವಕರ್ಮ ಕುಟುಂಬಕ್ಕೂ ಮಾಸಿಕ ತಲಾ ೧೦ ಸಾವಿರದಂತೆ ರಾಯಲ್ಟಿ ನೀಡಬೇಕೆಂದರು.

ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಬಳಿಕ ನಾಮಫಲಕ ಅನಾವರಣ ಮಾಡಲಾಯಿತು. ಸಮುದಾಯದ ಹಿರಿಯರಾದ ವಯೋವೃದ್ಧರು ಕಾಯಕ ಜೀವಿಗಳೂ ಆದ ೯೯ ವರ್ಷದ ರಾಮಕೃಷ್ಣಾಚಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಉಪಾಧ್ಯಕ್ಷರಾದ ಅಶೋಕ್, ಮುಖ್ಯಾಧಿಕಾರಿ ಸತೀಶ್ ಕುಮಾರ್, ಪಿಎಸ್‌ಐ ಧರ್ಮಪಾಲ್, ಪುರಸಭೆ ಸದಸ್ಯ ಯಶವಂತ್ ಕುಮಾರ್, ಇಂಜಿನಿಯರ್ ಚೌಡಪ್ಪ, ಭಾಸ್ಕರಾಚಾರ್, ಕನ್ನಡ ಸೋಮು, ಸಮಿತಿ ಉಪಾಧ್ಯಕ್ಷರಾದ ಎಸ್.ಶಿವಕುಮಾರ್, ಕಾರ್ಯದರ್ಶಿ ಕೆ.ಶ್ರೀನಿವಾಸಾಚಾರ್, ಖಜಾಂಚಿ ಭಾಸ್ಕರಾಚಾರ್, ನಿರ್ದೇಶಕರಾದ ಸಂಪತ್ತಾಚಾರ್, ಮೋಹನಾಚಾರ್, ಎಂ.ಪಿ.ಆನಂದಾಚಾರ್, ಸೋಮಾಚಾರ್, ನಾಗರಾಜು, ಡಿ.ಕೆ.ಕೃಷ್ಣಾಚಾರ್, ಚಂದ್ರಾಚಾರ್, ಯೋಗಾಚಾರ್, ಸ್ವಾಮಾಚಾರ್, ಸುರೇಶಾಚಾರ್ ಮುಂತಾದವರು ಇದ್ದರು.

ಕಾಯಕ ಮಾಡುವ ಎಲ್ಲ ಸಮುದಾಯಗಳೂ ಮತ್ತು ಕಾಯಕ ಜೀವಿಗಳೆಲ್ಲ ವಿಶ್ವಕರ್ಮರೇ ಆಗಿದ್ದಾರೆ. ಸಮುದಾಯ ಭವನಗಳು ಆಯಾ ಸಮಾಜದ ಉನ್ನತಿಗೆ ಬಳಕೆಯಾಗಬೇಕು. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ.

ಸಂತೋಷ್ ಕುಮಾರ್, ತಹಸೀಲ್ದಾರ್ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು