ವರದಿ: ನಜೀರ್ ಅಹಮದ್
ಮೈಸೂರು: ನಂದಿನಿ ಬ್ರಾಂಡ್ ಮತ್ತಷ್ಟು ಉತ್ತುಂಗಕ್ಕೇರಿಸುವುದು ಮತ್ತು ಉತ್ಪಾದಕರಿಗೆ ಹೆಚ್ಚಿನ ಲಾಭಾಂಶ ನೀಡುವ ಉದ್ದೇಶವನ್ನು ಮೈಮುಲ್ ಆಡಳಿತ ಮಂಡಳಿ ಹೊಂದಿದ್ದು, ಈ ನಿಟ್ಟಿನಲ್ಲಿ ಹಾಲಿನ ಪೌಡರ್ ಮಾಡುವುದು ಸೇರಿದಂತೆ ನಮ್ಮಲ್ಲೇ ಬಹುತೇಕ ಎಲ್ಲ ಹಾಲಿನ ಉತ್ಪನ್ನಗಳನ್ನು ತಯಾರು ಮಾಡುವ ಸಿದ್ದತೆ ನಡೆಸಿದ್ದೇವೆ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್. ಚೆಲುವರಾಜು ಹೇಳಿದರು.
ಮೈಸೂರಿನ ಪಡುವಾರಹಳ್ಳಿಯಲ್ಲಿ ಒಕ್ಕೂಟದ 2023-24 ನೇ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈಮುಲ್ ಡೇರಿಯಲ್ಲಿ ಬರೋಬ್ಬರಿ 9 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಕೇವಲ 3 ರಿಂದ 4 ಲಕ್ಷ ಲೀಟರ್ ಹಾಲನ್ನಷ್ಟೇ ಜನತೆ ಬಳಸುತ್ತಿದ್ದಾರೆ. ಉಳಿದ ಹಾಲನ್ನು ಪುಡಿ ಮಾಡಿ ಶೇಖರಿಸಿ ಉಪ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಚಾಕ್ ಲೆಟ್, ಪನ್ನೀರ್, ಚೀಸ್ ಸೇರಿ ಹಲವು ಉಪ ಉತ್ಪನ್ನಗಳ ತಯಾರಿಕೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ರೈತರು, ಒಕ್ಕೂಟದ ಸಿಬ್ಬಂದಿಗಳಿಗೆ ಅನೂಕೂಲ ಆಗುವ ನಿಯಮಗಳನ್ನು ಜಾರಿ ಮಾಡುವುದು. ಹೈನುಗಾರಿಕೆಗೆ ಬೇಕಾಗುವ ಸೌಲಭ್ಯ, ಸದಸ್ಯರು ಹಾಗೂ ಕಾರ್ಯದರ್ಶಿ ಮರಣ ಹೊಂದಿದಾಗ ಅವರ ನೆರವಿಗೆ ನಿಲ್ಲುವುದು ನಮ್ಮ ಉದ್ದೇಶವಾಗಿದೆ ಎಂದರು.
ಈಗಾಗಲೇ ಕೇರಳದಲ್ಲಿ ನಾವು ದಿನನಿತ್ಯ 20 ಸಾವಿರ ಲೀಟರ್ ಹಾಲು ಮಾರಾಟ ಮಾಡುತ್ತಿದ್ದೇವೆ. ತಮಿಳುನಾಡಿನ ಚೆನೈನಲ್ಲೂ ನಮ್ಮ ಹಾಲು ಇತರೆ ಉತ್ಪನ್ನ ಮಾರಾಟ ಮಾಡುತ್ತಿದ್ದು ಅವುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನ ಮಾಡಲಾಗುವುದು ಎಂದರು.
ಇನ್ನೂ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ದೇವಾಲಯಗಳಲ್ಲಿಯೂ ನಂದಿನಿ ಹಾಲು ಮತ್ತು ತುಪ್ಪವನ್ನೇ ಬಳಸಲು ಆದೇಶಿಸಿರುವುದು ಸ್ವಾಗತಾರ್ಹ. ಜತೆಗೆ ಹೈನುಗಾರಿಕೆಗೆ ಉತ್ತೇಜನಕ್ಕೆ ಹಲವು ತೀರ್ಮಾನ ಕೈಗೊಂಡಿದ್ದಾರೆ. ಇದರ ಪರಿಣಾಮ ಹಾಲಿನ ಪೌಡರ್‌ಗೂ ಬೇಡಿಕೆ ಹೆಚ್ಚಾಗಿ ಶುಭ ಸುದ್ದಿಗಳನ್ನು ಕೊಡುವ ಸಂದರ್ಭ ಬಂದಿದೆ. ಶಾಲಾ ಮಕ್ಕಳಿಗೂ ಕ್ಷೀರಧಾರೆ ಯೋಜನೆ ಮೂಲಕ ನಂದಿನಿ ಹಾಲು ನೀಡಲಾಗುತ್ತಿದೆ. ಇದು ಹೈನುಗಾರಿಕೆಗೆ ಒಳ್ಳೆಯ ದಿನಗಳನ್ನು ಎದುರು ನೋಡಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಶ್ರಮಿಸಿದ ಉತ್ಪಾದಕರು, ಡೇರಿ ಮುಖ್ಯಸ್ಥರು, ಮತ್ತಿತರರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಉತ್ಪಾದಕರ ಹತ್ತಾರು ಪ್ರಶ್ನೆಗಳಿಗೆ ಅಧ್ಯಕ್ಷರು ಸಮರ್ಥವಾಗಿ ಉತ್ತರಿಸಿ ಸಮಜಾಯಿಷಿ ನೀಡಿದರು. ವಾರ್ಷಿಕ ಮಹಾಸಭೆ ಯಶಸ್ವಿಯಾಗಿ ಜರುಗಿತು.
ಮೈಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಸುರೇಶ್ ನಾಯ್ಕ್ ಪ್ರಸಕ್ತ ಸಾಲಿನ ಸೂಚನ ಪತ್ರದ ವರದಿಯನ್ನು ಸಭೆಯಲ್ಲಿ ಓದಿ ಅನುಮೋದನೆ ಪಡೆದರು. ಒಕ್ಕೂಟದ ನಿರ್ದೇಶಕರಾದ ಎ.ಟಿ.ಸೋಮಶೇಖರ್, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಈರೇಗೌಡ, ಕೆ.ಎಸ್.ಕುಮಾರ್, ದಾಕ್ಷಾಯಣಿ ಬಸವರಾಜಪ್ಪ, ಲೀಲಾ ಬಿ.ಕೆ.ನಾಗರಾಜು, ಬಿ.ನೀಲಾಂಬಿಕೆ ಮಹೇಶ್ ಕುರಹಟ್ಟಿ, ಎ.ಶಿವಗಾಮಿ ಷಣ್ಮುಗಂ, ಬಿ.ಎಸ್.ಸದಾನಂದ, ಬಿ.ಗುರುಸ್ವಾಮಿ, ಸಿ.ಪ್ರಸಾದ್ ರೆಡ್ಡಿ, ಪಶುಸಂಗೋಪನ ಇಲಾಖೆ ಪ್ರತಿನಿಧಿ ಡಾ.ನಾಗರಾಜು, ಎಚ್.ಎಸ್.ಮಂಜುನಾಥ್, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಪ್ರತಿನಿಧಿ ರಜನಿ ತ್ರಿಪಾಠಿ ಇನ್ನಿತರರು ಉಪಸ್ಥಿತರಿದ್ದರು.
ಮೈಮುಲ್‌ಗೆ 1ಕೋಟಿ 7 ಲಕ್ಷ ಆದಾಯ
ಒಕ್ಕೂಟ ಪ್ರಸಕ್ತ ಸಾಲಿನಲ್ಲಿ 1 ಕೋಟಿ 7 ಲಕ್ಷ ರೂ.ಆದಾಯ ಬಂದಿದೆ. ಈ ಬಾರಿ ಒಕ್ಕೂಟ ಜನರಿಗೆ ಹೊಸ ಆಫರ್ ನೀಡುವ ಉದ್ದೇಶದಿಂದ ದಸರೆಯಲ್ಲಿ ಶೇ.10 ರಷ್ಟು ರಿಯಾಯಿತಿ ದರದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ನಿರ್ಧರಿಸಲಾಗಿದೆ. ಹೈನುಗಾರರಿಗೆ ನೀಡಬೇಕಾದ ಬಾಕಿ ಹಣವನ್ನು ಮೂರು ತಿಂಗಳಲ್ಲಿ ಕೊಡಲಾಗುವುದು. ವಿಮೆ ಮಾಡಲು ಕ್ರಮವಹಿಸಿ, ಪಶು ವೈದ್ಯಕೀಯ ಸೌಲಭ್ಯ ಮತ್ತಷ್ಟು ಬಲಗೊಳಿಸುತ್ತೇವೆ.
ಆರ್.ಚೆಲುವರಾಜು, ಅಧ್ಯಕ್ಷರು, ಮೈಮುಲ್
0 ಕಾಮೆಂಟ್‌ಗಳು