ಮೈಸೂರಿನ ಪ್ರವೇಶ ವೃತ್ತದಲ್ಲಿ ರಾಜ್ ಪ್ರತಿಮೆ ನಿರ್ಮಿಸಲು ದ್ರುವರಾಜ್ ಆಗ್ರಹ
ಸೆಪ್ಟೆಂಬರ್ 14, 2024
ಫೌಂಟನ್ ವೃತ್ತವಲ್ಲ;ಅದು ಡಾ.ರಾಜಕುಮಾರ್ ವೃತ್ತ!
ವರದಿ: ನಜೀರ್ ಅಹಮದ್
ಮೈಸೂರು : ಬೆಂಗಳೂರಿನಿಂದ ಮೈಸೂರು ನಗರವನ್ನು ಪ್ರವೇಶ ಮಾಡುತ್ತಿದ್ದಂತೆ ಸಿಗುವ ಫೌಂಟನ್ ವೃತ್ತಕ್ಕೆ ಡಾ.ರಾಜಕುಮಾರ್ ವೃತ್ತ ಎಂದು ಪಾಲಿಕೆ ಈಗಾಗಲೇ ನಾಮಕರಣ ಮಾಡಿದೆ, ಕೂಡಲೇ ಸರ್ಕಾರ ವೃತ್ತದಲ್ಲಿ ಡಾ.ರಾಜಕುಮಾರ್ ಪ್ರತಿಮೆ ನಿರ್ಮಿಸಬೇಕು ಇಲ್ಲದಿದ್ದಲ್ಲಿ ರಾಜ್ಯದಲ್ಲಿರುವ ಲಕ್ಷಾಂತರ ರಾಜ್ ಅಭಿಮಾನಿಗಳು ವೃತ್ತದಲ್ಲಿ ಸೇರಿ ಹೋರಾಟ ಮಾಡಬೇಕಾಗುತ್ತದೆ ಎಂದು ಈಡಿಗ ಸಮುದಾಯದ ಯುವ ಮುಖಂಡ ದ್ರುವರಾಜ್ ಎಚ್ಚರಿಕೆ ನೀಡಿದರು.
ಕಲಾಮಂದಿರದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಡಾ.ರಾಜಕುಮಾರ್ ಅವರಿಗೆ ಮೈಸೂರು ಎಂದರೆ ಪಂಚ ಪ್ರಾಣವಾಗಿತ್ತು. ಮೈಸೂರು ಪ್ರವೇಶ ಮಾಡುತ್ತಿದ್ದಂತೆ ಸ್ವರ್ಗದ ಬಾಗಿಲಿಗೆ ಬಂದಿದ್ದೇವೆ ಎನ್ನುತ್ತಿದ್ದರು. ವೃತ್ತದಲ್ಲಿದ್ದ ಡಾ.ರಾಜಕುಮಾರ್ ನಾಮಫಲಕವನ್ನು ಪಾಲಿಕೆ ನಿರ್ಲಕ್ಷ್ಯದಿಂದ ಕಡೆಗಣಿಸಲಾಗಿದೆ. ನಾಮಫಲಕವನ್ನೆ ತೆರವು ಮಾಡಿರುವುದು ರಾಜ್ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಕೂಡಲೇ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಾಮಫಲಕ ಮರು ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಸೇಂದಿ ಮತ್ತು ಸಾರಾಯಿ ಮಾರಾಟ ಮಾಡಿಕೊಂಡು ಬದುಕು ನಿರ್ವಹಣೆ ಮಾಡುತ್ತಿದ್ದ ಈಡಿಗ ಸಮುದಾಯದ ಜನರು ಈಗ ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಬೇಕು. ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಬೇಕೆಂದು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ದ್ರುವರಾಜ್ ಹೇಳಿದರು.
ಕಾಂಗ್ರೆಸ್ ಮುಖಂಡರೂ ಆದ ದ್ರುವರಾಜ್ ಅವರಿಗೆ ಯಾವುದೇ ರಾಜಕೀಯ ಸ್ಥಾನಮಾನ ಇನ್ನೂ ದೊರಕದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನನಗೆ ನಂಬಿಕೆ ಇದೆ. ಶೀಘ್ರದಲ್ಲೇ ನನಗೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದರು.
ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸಮುದಾಯದ ಜನರು ಬಂದಿದ್ದಾರೆ. ಕಲಾಮಂದಿರದಲ್ಲಿ ಸ್ಥಳಾವಕಾಶ ಸಾಲಲಿಲ್ಲ. ಮುಂದಿನ ಸಾರಿ ವಸ್ತು ಪ್ರದರ್ಶನ ಆವರಣ ಅಥವಾ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಸುತ್ತೇವೆ ಎಂದು ಅವರು ಹೇಳಿದರು.
0 ಕಾಮೆಂಟ್‌ಗಳು