ಪಿಎಂ ಸೂರ್ಯಘರ್, ಕುಸುಮ್ ಬಿ ಯೋಜನೆ ಸದ್ಬಳಕೆಗೆ ಸಲಹೆ
ವರದಿ-ನಜೀರ್ ಅಹಮದ್
ಮೈಸೂರು : ಪ್ರಧಾನ ಮಂತ್ರಿ ಸೂರ್ಯ ಘರ್ ಮತ್ತು ಕುಸುಮ್ ಬಿ ಯೋಜನೆಯನ್ನು ಸಾರ್ವಜನಿಕರು ಮತ್ತು ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಚೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕರಾದ ಕೆ.ಎಂ.ಮುನಿಗೋಪಾಲರಾಜು ಹೇಳಿದರು.
ಗುರುವಾರ ಸಂಜೆ ನಗರದ ಖಾಸಗಿ ಹೋಟೆಲ್‍ನಲ್ಲಿ ‘ಮಿಂಚು ಎನರ್ಜಿ’ ಸಂಸ್ಥೆಯವರು ನೂತನವಾಗಿ ಮೈಸೂರಿನಲ್ಲಿ ಪ್ರಾರಂಭಿಸಿರುವ ಆಂಕರ್ ಪೆನಾಸೋನಿಕ್ ಸೋಲಾರ್ ಮಾಡ್ಯುಲರ್, ಇವಿ ಚಾರ್ಜಿಂಗ್ ಸಲ್ಯೂಷನ್ ಮತ್ತು ಲೀವಾ ಹೈಬ್ರೀಡ್ ಇನ್ವರ್ಟರ್ ಯೂನಿಟ್‍ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಮನೆಗಳಿಗೆ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಎನರ್ಜಿ ವಿದ್ಯುತ್ ಸಂಪರ್ಕ ಅಳವಡಿಸಿಕೊಂಡರೆ ಒಂದು ಕಿಲೋ ವ್ಯಾಟ್‍ಗೆ 50 ರಿಂದ 55 ಸಾವಿರ ಖರ್ಚು ಬರುತ್ತದೆ. ಅದಕ್ಕೆ ಸರ್ಕಾರದಿಂದ 30 ಸಾವಿರ ರೂ. ಸಬ್ಸಿಡಿ ಸಿಗುತ್ತದೆ. ಕೇವಲ 20 ರಿಂದ 25 ಸಾವಿರ ಖರ್ಚು ಗ್ರಾಹಕರಿಗೆ ಬರುತ್ತದೆ. ಇದನ್ನು ನೀವು 2 ವರ್ಷದ ವಿದ್ಯುತ್ ಬಿಲ್‍ನಲ್ಲಿ ಉಳಿತಾಯ ಮಾಡಬಹುದು.
ಹಾಗೆಯೇ 2 ಕಿಲೋ ವ್ಯಾಟ್ ಸೋಲಾರ್ ಸಂಪರ್ಕ ಪಡೆದರೆ ರೂ. 1.10 ಲಕ್ಷದಿಂದ, ರೂ. 1.20 ಲಕ್ಷ ರೂ. ಖರ್ಚು ಬರುತ್ತದೆ. ಇದಕ್ಕೂ ಸಹ 60 ಸಾವಿರ ರೂ. ಸಬ್ಸಿಡಿ ಗ್ರಾಹಕರ ಖಾತೆಗೆ ನೇರವಾಗಿ ಜಮೆಯಾಗುತ್ತದೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದ್ದು, 200 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತದೆ. 200 ಯೂನಿಟ್‍ಗಿಂತಲೂ ಹೆಚ್ಚು ವಿದ್ಯುತ್ ಉಪಯೋಗ ಮಾಡುವ ಗ್ರಾಹಕರಿಗೆ ಈ ಯೋಜನೆಗಳು ಬಹಳ ಉಪಯೋಗಿ ಎಂದರು.
ಅದೇ ರೀತಿ ಕುಸುಮ್ ಬಿ ಯೋಜನೆಯಲ್ಲಿ ಟ್ರಾನ್ಸ್‍ಫಾರ್ಮರ್‍ನಿಂದ 500 ಮೀಟರ್ ದೂರ ಇರುವ ರೈತರ ಜಮೀನುಗಳಿಗೆ ಸೋಲಾರ್ ಸಂಪರ್ಕ ಪಡೆದರೆ 5 ರಿಂದ 6 ಲಕ್ಷ ರೂ ಖರ್ಚಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಸೇರಿ ಶೇ,80 ರಷ್ಟು ಸಬ್ಸಿಡಿ ಸಿಗುತ್ತದೆ. ಉಳಿದ ಶೇ,20 ರಷ್ಟು ಹಣ ರೈತರು ಕಟ್ಟಬೇಕಿದ್ದು, ಅದನ್ನೂ ಸಹ ಪ್ರಾರಂಭದಲ್ಲಿ ಸಂಪರ್ಕ ಪಡೆಯುವಾಗ ಚೆಸ್ಕಾಂ ಇಲಾಖೆಯೇ ಶೇ.20 ರಷ್ಟು ಹಣವನ್ನು ಭರಿಸುತ್ತದೆ. ನಂತರ ರೈತರು ಆ ಹಣವನ್ನು ಚೆಸ್ಕಾಂ ಇಲಾಖೆಗೆ ಕಟ್ಟಬೇಕಿದೆ ಎಂದು ಹೇಳಿದರು.
ಸೋಲಾರ್ ವಿದ್ಯುತ್ ಸಂಪರ್ಕ ಪಡೆಯುವುದರಿಂದ ಸಾರ್ವಜನಿಕರು ಮತ್ತು ರೈತರು ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದು. ಇದರಿಂದ ವಿದ್ಯುತ್ ಸಮಸ್ಯೆಗೂ ಪರಿಹಾರ ದೊರಕಿದಂತಾಗುತ್ತದೆ. ಸೋಲಾರ್ ಉಪಕರಣಗಳನ್ನು ಅಳವಡಿಸಿಕೊಳ್ಳುವಾಗ ಗುಣಮಟ್ಟದ ಉಪಕರಣ ಅಳವಡಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯನ್ನು ಪಡೆಯಲು ಇಚ್ಛಿಸುವವರು ಮೊಬೈಲ್ ಸಂಖ್ಯೆ-9480837543ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಅವರು ಹೇಳಿದರು.
ಸನ್ ಎಪಿ ಇಕೋ ಪವರ್ ಸಂಸ್ಥೆಯ ಶ್ರೀನಿವಾಸ್ ಮಾತನಾಡಿ, ಸೋಲಾರ್ ವಿದ್ಯುತ್ ಬಳಕೆಯಿಂದ ಗ್ರಾಹಕರಿಗೆ ನಿರಂತರವಾಗಿ ವಿದ್ಯುತ್ ದೊರೆಯುತ್ತದೆ. ಯಾವುದೇ ಹೆಚ್ಚಿನ ಖರ್ಚು ಬರುವುದಿಲ್ಲ. ಉತ್ಕøಷ್ಟ ಗುಣಮಟ್ಟದ ಬ್ಯಾಟರಿ ಮತ್ತು ಇನ್ವರ್ಟಗಳು ಲಭ್ಯವಿದೆ. ಬ್ಯಾಂಕ್ ಸಾಲ ಮತ್ತು ಸರ್ಕಾರದ ಸಬ್ಸಿಡಿಗಳೂ ಲಭ್ಯವಿದೆ. ಯಾವುದೇ ಸಮಸ್ಯೆ ಉಂಟಾದರೂ ತಕ್ಷಣ ಪರಿಹಾರ ನೀಡಲು ನಮ್ಮಲ್ಲಿ ಉತ್ತಮ ಸರ್ವಿಸ್ ಇಂಜಿನಿಯರ್‍ಗಳು ಸಿದ್ದರಾಗಿದ್ದಾರೆ. ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಚೆಸ್ಕಾಂ ಅಭಿಯಂತರರಾದ ಪೂರ್ಣಚಂದ್ರ, ಕಾರ್ತಿಕ್, ಮಿಂಚು ಎನರ್ಜಿ ಸಂಸ್ಥೆಯ ಸಿ.ಎಂ.ಪ್ರಣವ್, ಸಚಿನ್, ಸನ್ ಎಪಿ ಇಕೋ ಪವರ್ ಸಂಸ್ಥೆಯ ರಿಷಿ, ಪೆನಾಸೋನಿಕ್ ಸಂಸ್ಥೆಯ ಮಂಜುನಾಥ್, ಮಿಲಿಂದ್, ಲೀವಾ ಸಂಸ್ಥೆಯ ಪ್ರತೀಕ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು