ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಟ್ಟಿದರೆ ರಾಜ್ಯದ ಜನರು ದಂಗೆ ಏಳುತ್ತಾರೆ

ಬಿಜೆಪಿ-ಜೆಡಿಎಸ್‌ಗೆ ಎಚ್ಚರಿಕೆ ಸಂದೇಶ ನೀಡಿದ ಡಾ.ಡಿ.ತಿಮ್ಮಯ್ಯ

ನಜೀರ್ ಅಹಮದ್, ಪಾಂಡವಪುರ
ಮೈಸೂರು : ಜನ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಟ್ಟಿದರೆ ರಾಜ್ಯದ ಜನರು ದಂಗೆ ಏಳುತ್ತಾರೆ. ಮುಂದಿನ ಘಟನೆಗಳು ಊಹಿಸಲೂ ಅಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿ ಬುಧವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ೧೩೬ ಕಾಂಗ್ರೆಸ್ ಶಾಸಕರು ರಾಜ್ಯದಲ್ಲಿ ಆಯ್ಕೆಯಾಗಿ ಸಿದ್ದರಾಮಯ್ಯ ಅವರನ್ನು ಸಂವಿಧಾನಾತ್ಮಕವಾಗಿ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದಾರೆ. ನಮಗೆ ಜನಾದೇಶ ಇದೆ. ಸಿದ್ದರಾಮಯ್ಯ ನಾಡಿನ ಜನರಿಗೆ ಅಗತ್ಯವಾಗಿ ಬೇಕಾದ ಕಾರ್ಯಕ್ರಮ ನೀಡಿದ್ದಾರೆ. ರಾಜ್ಯದ ಜನರು ಸಂತುಷ್ಟರಾಗಿದ್ದಾರೆ. ಜನರು ನಮ್ಮ ಪರ ಇದ್ದಾರೆ. ಸಿದ್ದರಾಮಯ್ಯ ವಿರುದ್ಧ ಯಾವುದೇ ಹಗರಣ, ಆರೋಗಳು ಇಲ್ಲ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಥ ಎದುರಾಳಿ ಎಂದರೆ ಅದು ಸಿದ್ದರಾಮಯ್ಯ ಮಾತ್ರ, ಅವರ ಶಕ್ತಿಯನ್ನು ಕುಂದಿಸಿದರೆ ರಾಜ್ಯದಲ್ಲಿ ಮತ್ತೊಮ್ಮೆ ಅಡಳಿತ ನಡೆಸಬಹುದು ಎಂಬ ಹುನ್ನಾರ ಬಿಜೆಪಿ ಮತ್ತು ಜೆಡಿಎಸ್‌ನವರದು. ಈ ಕಾರಣಕ್ಕಾಗಿ ಯಾವುದೇ ಆರೋಪಗಳು ಇಲ್ಲದಿದ್ದರೂ ಸುಖಾ ಸುಮ್ಮನೆ ಕಾಂಗ್ರೆಸ್ ಸರ್ಕಾರವನ್ನು ಸುಳ್ಳು ಆರೋಪಗಳಿಂದ ಅಸ್ತಿರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಇದೀಗ ರಾಜಭವನ ಬಳಸಿಕೊಂಡಿದೆ ಎಂದು ದೂರಿದರು.

ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ರಾಜ್ಯದ ಜನರು ದಂಗೆ ಏಳುವ ಸಾಧ್ಯತೆ ಇದೆ. ರಾಜ್ಯ ಹೊತ್ತಿ ಉರಿಯುತ್ತದೆ. ಬಿಜೆಪಿಯವರಿಗೆ ಇದೇ ಬೇಕು. ಅವರಿಗೆ ರಾಜ್ಯದ ಜನರು ನೆಮ್ಮದಿಯಿಂದ, ಶಾಂತಿಯಿಂದ, ಸುಖದಿಂದ ಇರುವುದು ಬೇಕಿಲ್ಲ. ಈ ಕಾರಣಕ್ಕಾಗಿ ರಾಜ್ಯದ ಜನತೆಗೆ ಬಿಜೆಪಿಯ ಹುನ್ನಾರಗಳನ್ನು ತಿಳಿಸಲು ಆಗಸ್ಟ್ ೯ ರಂದು ಮೈಸೂರಿನಲ್ಲಿ ಜನಾಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ. ೩ ಲಕ್ಷ ಜನರು ಸೇರುವ ಸಾಧ್ಯತೆ ಇದೆ. ಹಳ್ಳಿ ಹಳ್ಳಿಗಳಿಂದಲೂ ಜನರು ಸ್ವಯಂ ಪ್ರೇರಿತರಾಗಿ ಈ ಜನಾಂದೋಲನದಲ್ಲಿ ಭಾಗವಹಿಸಿ, ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಿದ್ದಾರೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು