ಮಾವಿನಹಳ್ಳಿ ಸಿದ್ದೇಗೌಡ ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ : ಅರಸಿನಕೆರೆ ಸ್ವಾಮೀಗೌಡ ಆರೋಪ


 ವರದಿ: ನಜೀರ್ ಅಹಮದ್

ಮೈಸೂರು :  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಡಾ ಅಧ್ಯಕ್ಷರಾದ ಮರೀಗೌಡರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮಗೆ ಟಿಕೆಟ್ ಕೈ ತಪ್ಪಿದ್ದರೂ ಸಿದ್ದರಾಮಯ್ಯ ಅವರ ಅಣತಿಯಂತೆ ಸತತ 30 ದಿನಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾವಿನಹಳ್ಳಿ ಸಿದ್ದೇಗೌಡರ ಪರವಾಗಿ 314 ಬೂತ್‍ಗಳಲ್ಲಿ ಸ್ವಂತ ಖರ್ಚಿನಲ್ಲಿ ಪ್ರಚಾರ ನಡೆಸಿದ್ದರು. ಆದರೇ, ಮಾವಿನಹಳ್ಳಿ ಸಿದ್ದೇಗೌಡರು ಕೊನೆಯ ಮೂರು ದಿನಗಳ ಕಾಲ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮತದಾರರಿಂದ ಕಣ್ಮರೆಯಾಗಿ ಅವರ ಸೋಲಿಗೆ ಅವರೇ ಕಾರಣರಾಗಿದ್ದು, ಮರೀಗೌಡರ ಮೇಲೆ ಆರೋಪ ಮಾಡುವುದು ತಪ್ಪು ಎಂದು ಅಹಿಂದಾ ಮುಖಂಡ ಅರಸಿನಕೆರೆ ಸ್ವಾಮೀಗೌಡ ಹೇಳಿದರು.

ಚಾಮುಂಡೇಶ್ವರಿ ಮತದಾರರು 82 ಸಾವಿರ ಓಟು ಕೊಟ್ಟಿದ್ದು, ಸಿದ್ದರಾಮಯ್ಯ ಅವರ ಮುಖ ನೋಡಿ

ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಅಹಿಂದಾ ಮುಖಂಡರು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೇ ಬಣವಿಲ್ಲ, ಒಂದೇ ಬಣ ಅದು ಸಿದ್ದರಾಮಯ್ಯನವರ ಬಣವಾಗಿದೆ. ಮತದಾರರು 82 ಸಾವಿರ ಓಟು ಕೊಟ್ಟಿದ್ದು, ಸಿದ್ದರಾಮಯ್ಯ ಅವರ ಮುಖ ನೋಡಿಯೇ ವಿನಃ ಮಾವಿನಹಳ್ಳಿ ಸಿದ್ದೇಗೌಡರ ಮುಖ ನೋಡಿ ಅಲ್ಲ.

ಮಾವಿನಹಳ್ಳಿ ಸಿದ್ದೇಗೌಡ ಯಾವ ಪಕ್ಷದಲ್ಲಿದ್ದಾರೆ ಸ್ಪಷ್ಟಪಡಿಸಲಿ

ಸಿದ್ದೇಗೌಡರ ಸೋಲಿಗೆ ಅವರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ. ಹೀಗಿದ್ದರೂ ಮಾವಿನಳ್ಳಿ ಸಿದ್ದೇಗೌಡರು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರ ಆದೇಶ, ಅನುಮತಿ ಇಲ್ಲದೆ, ತಮ್ಮದೇ ಪಕ್ಷದ ಒಬ್ಬ ಹಿರಿಯ ಮುಖಂಡರ ವಿರುದ್ಧ ಮಾತನಾಡಿದ್ದು ತಪ್ಪು. ಅವರು ಈಗ ಯಾವ ಪಕ್ಷದಲ್ಲಿ ಇದ್ದಾರೆ ಎನ್ನುವುದು ಮೊದಲು ಸ್ಪಷ್ಟಪಡಿಸಲಿ ಎಂದರು. ನಾನು 20 ವರ್ಷದಿಂದ ಅಹಿಂದಾ ಹೋರಾಟದಲ್ಲಿ ಭಗಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಯಾವುದೇ ಅಭ್ಯರ್ಥಿ ಗೆದ್ದರೂ ನಮಗೆ ಸಿದ್ದರಾಮಯ್ಯ ಅವರ ಕೈ ಬಲಪಡಿಸಿದಂತೆ, ಅದರಲ್ಲಿ ಯಾವುದೇ ರಾಜಿ ಇಲ್ಲ. 2023 ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಲೆಕ್ಕಾಚಾರದಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಸ್ವರ್ಧಿಸಿದ್ದರೂ ಗೆದ್ದೇ ಗೆಲ್ಲುವ ಅವಕಾಶ ಇತ್ತು.

ಯಾವುದೇ ಕಾರಣದಿಂದ ಪಕ್ಷಕ್ಕೆ ಸೋಲಾಗಬಾರದು ಎಂದು ಜಾತಿ ಲೆಕ್ಕಾಚಾರದಂತೆ ಮರೀಗೌಡರಿಗೆ ನಿಗದಿಯಾಗಿದ್ದ ಟಿಕೆಟ್ ಅನ್ನು ಸ್ವತಃ ಸಿದ್ದರಾಮಯ್ಯ ಅವರು ಮಾವಿನಳ್ಳಿ ಸಿದ್ದೇಗೌಡರಿಗೆ ನೀಡಿದರು. ಆದರೇ. ಸಿದ್ದೇಗೌಡರೇ ತಮ್ಮ ಗೆಲುವು ಹಾಳು ಮಾಡಿಕೊಂಡರು, ಆದ್ರೆ ಯಾರಿಗೆ ಬುಕ್ ಆದ್ರೋ ಗೊತ್ತಿಲ್ಲ ಎಂದು ಟೀಕಿಸಿದರು.

ಸಿದ್ದೇಗೌಡರು ಪಡೆದ 82 ಸಾವಿರ  ಓಟು, ಸಿದ್ದೇಗೌಡರ ಓಟಲ್ಲ ಅದು ಸಿದ್ದರಾಮಯ್ಯ ಅವರ ಓಟು. ಹೀಗಿದ್ದರೂ ಕಳೆದ 40 ವರ್ಷದಿಂದ ಮರೀಗೌಡರು ಸಿದ್ದರಾಮಯ್ಯ ಅವರ ಆಪ್ತರಾಗಿ ರಾಜಕಾರಣ ಮಾಡಿದ್ದು, ಅವರ ಪಕ್ಷ ಸೇವೆಗೆ ಮುಡಾ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಮುಡಾ ಬಗ್ಗೆ ನಿಮಗೆ ಏನು ಗೊತ್ತಿದೆ? ಗೊತ್ತಿದ್ದರೆ ದಾಖಲೆ ತಂದು ದೇಸಾಯಿ ತನಿಖಾ ತಂಡಕ್ಕೆ ನೀಡಿ ಎಂದು ಕಿಡಿ ಕಾರಿದರು.

ರಾಜ್ಯಪಾಲರಿಂದ ಪಕ್ಷಪಾತ:

ಕಳೆದ ಹಲವು ದಿನಗಳ ಹಿಂದೆಯೇ ಎಸ್‍ಐಟಿ ಮತ್ತಿತರ ತನಿಖಾ ತಂಡಗಳು ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ಕೋರಿ ಪತ್ರ ಬರೆದಿದೆ. 

ಇದರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು, ಇದೀಗ ಬಿಜೆಪಿ ಜತೆ ಸೇರಿದ್ದಾರೆ. ಮುರುಗೇಶ್ ನಿರಾಣಿ ಮತ್ತು ಶಶಿಕಲಾ ಜೊಲ್ಲೆ ಪ್ರಬಲ ಲಿಂಗಾಯತ ಕೋಮಿನವರು ಬಿಜೆಪಿ ಮುಖಂಡರು. ಅವರ ವಿರುದ್ಧ ತನಿಖೆ ನಡೆದು ಅವರು ತಪ್ಪು ಮಾಡಿದ್ದಾರೆ ಎಂದು ಗೊತ್ತಿದ್ದರೂ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದರೆ ರಾಜ್ಯದಲ್ಲಿ ಪಕ್ಷಕ್ಕೆ ಮುಜುಗರ ಉಂಟಾಗುತ್ತದೆ ಎಂದು ರಾಜ್ಯಪಾಲರು ಅನುಮತಿ ನೀಡಿಲ್ಲ. ಆದರೇ, ಯಾವುದೇ ತಪ್ಪು ಮಾಡದ, ಯಾವುದೇ ತನಿಖಾ ತಂಡ ದೂರು ನೀಡದಿದ್ದರೂ ಅಹಿಂದಾ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಒಬ್ಬ ಖಾಸಗಿ ವ್ಯಕ್ತಿ ದೂರು ನೀಡಿದಾಕ್ಷಣ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವುದು ಮತ್ತು 136 ಸೀಟು ಪಡೆದು ಮುಖ್ಯಮಂತ್ರಿ ಆದ ಒಬ್ಬ ಅಹಿಂದಾ ನಾಯಕನನ್ನು ಹಾಗೂ 40 ವರ್ಷ ರಾಜಕಾರಣದಲ್ಲಿ ಕಪ್ಪು ಚುಕ್ಕೆ ಇಲ್ಲದ

ಪ್ರಾಮಾಣಿಕ ಮುಖಂಡರನ್ನು ಅಧಿಕಾರದಿಂದ ಕೆಳಗಿಳಿಸುವ ಸಂವಿಧಾನ ವಿರೋಧಿ  ಹುನ್ನಾರವಲ್ಲದೇ ಮತ್ತೇನು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಿಜೆಪಿ ಜೆಡಿಎಸ್ ಎಂದೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ.

ಹೀಗಿದ್ದರೂ ಬಹುಮತದ ಸರ್ಕಾರ ಬೀಳಿಸಲು ರಾಜ್ಯಪಾಲರ ಮೂಲಕ  ಸಂಚು ರೂಪಿಸಿರುವುದನ್ನು ರಾಜ್ಯದ ಜನರಲ್ಲದೇ, ಇಡೀ ದೇಶದ ಜನರು ನೋಡುತ್ತಿದ್ದಾರೆ. ಆದರೇ, ನೀವು ಸಿದ್ದರಾಮಯ್ಯರನ್ನು ಅಲುಗಾಡಿಸಲು ಸಾಧ್ಯವಿಲ್ಲ. ಅವರೆಂದೂ ಆರ್‍ಟಿಜಿಎಸ್ ಮೂಲಕ ಅಥವಾ ಚೆಕ್ ಮೂಲಕ ಯಾವತ್ತೂ ಲಂಚ ಪಡೆದು ಜೈಲಿಗೆ ಹೋಗಿಲ್ಲ. ನೀವು ವಾಮಾಚಾರ, ಹಿಂಬಾಗಿಲ ರಾಜಕಾರಣ, ಕುತಂತ್ರ ಮಾಡುವುದನ್ನು ನಿಲ್ಲಿಸಿ ತಾಕತ್ತಿದ್ದರೆ, ಜನರಿಂದ ಆಯ್ಕೆಯಾಗಿ ಅಧಿಕಾರಕ್ಕೆ ಬನ್ನಿ ಎಂದು ಸವಾಲು ಹಾಕಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು