ಶ್ರೀರಂಗಪಟ್ಟಣ : ಸುರಕ್ಷತೆ, ಶುಚಿತ್ವ ಕಾಪಾಡದ ಹೋಟೆಲ್‌ಗಳಿಗೆ ದಂಡ ವಿಧಿಸಿದ ಅಂಕಿತ ಅಧಿಕಾರಿಗಳು

ಆಹಾರ ಸುರಕ್ಷತಾ ಆಂದೋಲನ


 ಶ್ರೀರಂಗಪಟ್ಟಣ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ

ಅನುಷ್ಠಾನ ಆಂದೋಲನದ ಭಾಗವಾಗಿ ಶನಿವಾರ ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯ ಮೈಸೂರು-ಬೆಂಗಳೂರು ಹೆದ್ದಾರಿ, ಗಂಜಾಮ್,  ನಿಮಿಷಾಂಬ ದೇವಸ್ಥಾನದ ರಸ್ತೆ ಮತ್ತು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಅಂಕಿತ ಅಧಿಕಾರಿ ಡಾ. ಶಶಿದರ ನೇತೃತ್ವದಲ್ಲಿ ದಾಳಿ ನಡೆಸಿ ಶುಚಿತ್ವ ಕಾಪಾಡದವರಿಗೆ ದಂಡ ಹಾಕಲಾಯಿತು. 

ಈ ಸಂದರ್ಭದಲ್ಲಿ ಆಹಾರ ಸುರಕ್ಷತಾಧಿಕಾರಿಗಳು ವಿವಿಧ ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿ ವ್ಯಾಪಾರಸ್ಥರು ಮತ್ತು ಇತರೆ ಆಹಾರ ವ್ಯಾಪಾರಿಗಳನ್ನು ಭೇಟಿ ಮಾಡಿ ಆಹಾರ ಉದ್ದಿಮೆಗಳನ್ನು ಪರಿಶೀಲಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡದ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದರಲ್ಲದೇ ಮುಂದೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರ ಸೂಚನೆಯಂತೆ ಆಗಸ್ಟ್ ೩೦ ಮತ್ತು ೩೧ ರಂದು ಎರಡು ದಿನಗಳ ಕಾಲ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಸಂಬಂಧ ಈ ದಾಳಿ ನಡೆಯಿತು.

ಈ ಸಂದರ್ಭದಲ್ಲಿ ಅಂಕಿತ ಅಧಿಕಾರಿ ಡಾ. ಶಶಿದರ ಮಾತನಾಡಿ, ಆಹಾರ ಸಿದ್ಧಪಡಿಸುವ ಸ್ಥಳ, ವ್ಯಾಪಾರದ ಸ್ಥಳಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು, ತಮ್ಮ ಆರೋಗ್ಯವು ಸಹ ಉತ್ತಮವಾಗಿರಬೇಕು ಎಂದು ಆಹಾರ ವ್ಯಾಪಾರಿಗಳಿಗೆ ಆಹಾರ ಸುರಕ್ಷತಾಧಿಕಾರಿಗಳು ಜಾಗೃತಿ ನೀಡಿ, ಆಹಾರ ಪದಾರ್ಥಗಳ

ತಯಾರಕರು, ಮಾರಾಟಗಾರರು, ದಾಸ್ತಾನುದಾರರು ಶುಚಿತ್ವಕ್ಕೆ ಒತ್ತು ನೀಡಬೇಕು. ಗ್ರಾಹಕರಿಗೆ ಶುದ್ಧವಾದ ಆಹಾರವನ್ನು ಮತ್ತು ನೀರನ್ನುಪೂರೈಸಬೇಕು, ಆಹಾರ ಉದ್ದಿಮೆಗಳಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳತಕ್ಕದ್ದು ಎಂದು ಅಧಿಕಾರಿಗಳು ಜಾಗೃತಿ ಮೂಡಿಸಿದರು.


ಆಹಾರಕ್ಕೆ ಕೃತಕ ಬಣ್ಣಗಳನ್ನು ಬಳಸಬಾರದು. ಮೊಟ್ಟೆ, ಮೀನು,ಮಾಂಸದ ಪದಾರ್ಥಗಳನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿ ಬಳಕೆ ಮಾಡುವಂತಾಗಬೇಕು ಎಂದು ಅಧಿಕಾರಿಗಳು ಆಹಾರ ಉದ್ದಿಮೆದಾರರಿಗೆ ತಿಳಿಸಿದರು.

ಅಂಕಿತ ಅಧಿಕಾರಿ ಡಾ. ಶಶಿದರ, ಶ್ರೀರಂಗಪಟ್ಟಣ ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ಶ್ರೀನಿವಾಸಬಾಬು, ಆಹಾರ ಸುರಕ್ಷತಾ ಅಧಿಕಾರಿ ಸಿ.ಎನ್. ಸಂತೋಷ್ ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು