ಜಿಂದಾಲ್‌ಗೆ ಜಮೀನು ಮಾರಾಟದ ಹಿಂದೆ ಕೊಟ್ಯಾಂತರ ರೂ. ಕಿಕ್‌ಬ್ಯಾಕ್ ವಾಸನೆ : ಎಂಎಲ್‌ಸಿ ಹೆಚ್.ವಿಶ್ವನಾಥ್ ಆರೋಪ


 ವರದಿ : ನಜೀರ್ ಅಹಮದ್

ಮೈಸೂರು : ಕೊಟ್ಯಾಂತರ ರೂ. ಬೆಲೆ ಬಾಳುವ ಖನಿಜಯುಕ್ತ ಭೂಮಿಯನ್ನು ಸರ್ಕಾರ ಕೇವಲ ಎಕರೆಗೆ 1.15 ಲಕ್ಷ ರೂ.ನಂತೆ 3667 ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡಿದ್ದರ ಹಿಂದೆ ಭಾರಿ ಪ್ರಮಾಣದ ಹಣವನನ್ನು ಕಿಕ್‍ಬ್ಯಾಕ್ ರೂಪದಲ್ಲಿ ಪಡೆಯಲಾಗಿದ್ದು, ಇದರಲ್ಲಿ ವಿರೋಧ ಪಕ್ಷವೂ ಶಾಮೀಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆರೋಪಿಸಿದರು. 

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸದರಿ ಭೂಮಿಯಲ್ಲಿ ಶೇ,62ರಷ್ಟು ಈಲ್ಡ್ ಇರುವ ಕಬ್ಬಿಣದ ಅದಿರು ಇದೆ ಎಂದು ಕಾನೂನು ಇಲಾಖೆ 2017 ರಲ್ಲಿಯೇ ವರದಿ ನೀಡಿತ್ತು. ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಈ ಭೂಮಿ ಮಾರಾಟ ಮಾಡಲು ಪ್ರಯತ್ನ ನಡೆಸಿದ್ದರು. ಇದನ್ನು ವಿರೋಧಿಸಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು, ಬಳಿಕ 2021 ರಲ್ಲಿ ಬಿಎಸ್‍ವೈ ಮುಖ್ಯಮಂತ್ರಿ ಆದಾಗಲೂ ಎಕರೆಗೆ 1.20 ಲಕ್ಷದಂತೆ ಈ ಜಮೀನು ಮಾರಲು ತೀರ್ಮಾನ ಮಾಡಲಾಗಿತ್ತು, ವಿರೋಧ ಪಕ್ಷಗಳ ವಿರೋಧದಿಂದ ವ್ಯಾಪಾರ ಕುದುರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಅತಿ ಕಡಿಮೆ ಬೆಲೆಗೆ ಈ ಭೂಮಿಯನ್ನು ಮಾರಾಟ ಮಾಡಿದ್ದು, ವಿರೋಧ ಪಕ್ಷದವರೂ ಶಾಮೀಲಾಗಿದ್ದಾರೆ ಎಂಬ ಅನುಮಾನವಿದೆ ಎಂದರು.

ಈ ಭೂಮಿ ಸಾರ್ವಜನಿಕರ ಆಸ್ತಿ, ಯಾವುದೇ ರಾಜಕೀಯ ಪಕ್ಷದ ಆಸ್ತಿಯಲ್ಲ, ಪ್ರಸ್ತುತ ರಾಜ್ಯದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಕಬ್ಬಿಣದ ಅದಿರುಳ್ಳ ಭಾರಿ ಬೆಲೆಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿರುವುದರ ಹಿಂದೆ ಪಡೆದಿರುವ ಕಿಕ್‍ಬ್ಯಾಕ್ ಹಣವನ್ನು ಸರ್ಕಾರ ಉಳಿಸಿಕೊಳ್ಳಲು ಅಥವಾ ಶಾಸಕರ ಖರೀದಿಗೆ ಬಳಸಿಕೊಳ್ಳುವ ಅನುಮಾನವೂ ಕಾಡಿದೆ ಎಂದರು.

ಒಂದು ಕಡೆ ಸರ್ಕಾರ 3667 ಎಕರೆ ಬೆಲೆ ಬಾಳುವ ಭೂಮಿಯನ್ನು ಕೇವಲ 52 ಕೋಟಿಗೆ ಮಾರಾಟ ಮಾಡಿದ್ದರೇ, ಮತ್ತೊಂದು ಕಡೆ ಕೇವಲ 3 ಎಕರೆ 16 ಕುಂಟೆ ಭೂಮಿ ಕಳೆದುಕೊಂಡಿರುವ ಸಿದ್ದರಾಮಯ್ಯ ಕುಟುಂಬದವರು 62 ಕೋಟಿ ಪರಿಹಾರ ಕೇಳುತ್ತಿದ್ದಾರೆ. ನೋಡಿ ಎಂತಹ ಕಾಲ ಬಂತು ಎಂದು ವ್ಯಂಗ್ಯವಾಡಿದ ವಿಶ್ವನಾಥ್ ಈ ಪ್ರಕರಣದಿಂದ ರಾಜ್ಯದ ಬೊಕ್ಕಸಕ್ಕೆ ಕೊಟ್ಯಾಂತರ ರೂ. ನಷ್ಟವಾಗಿದೆ. ಕೂಡಲೇ ಈ ವಹಿವಾಟು ರದ್ದು ಮಾಡಿ, ಮಾರಾಟ ಪ್ರಕ್ರಿಯೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

ರಾಜಿನಾಮೆಗೆ ಕೋರ್ಟ್‍ನ್ನು ಕಾಯಬೇಡಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕೋರ್ಟ್ ತೀರ್ಮಾನ ಕಾಯದೆ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು. ಅದೇ ರೀತಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಕೂಡ ರಾಜಿನಾಮೆ ಕೊಟ್ಟು ನಂತರ ತನಿಖೆ ಎದುರಿಸಬೇಕೆಂದು ವಿಶ್ವನಾಥ್ ಹೇಳಿದರು.  

ಸುರೇಶ ಫೈಲು ಹೊತ್ತು ಹೋಗಿದ್ದಾನೆ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಶ್ವನಾಥ್, 2 ತಿಂಗಳ ಹಿಂದೆಯೇ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಹೆಲಿಕಾಪ್ಟರ್ ಮೂಲಕ ಫೈಲುಗಳನ್ನು ಹೊತ್ತುಕೊಂಡು ಹೋಗಿದ್ದಾನೆ. ಇಲ್ಲಿ ಇನ್ನೇನೂ ಉಳಿದಿಲ್ಲ. ಸುಖಾ ಸುಮ್ಮನೆ ಮುಡಾ ಕಚೇರಿ ಎದುರು ಪೊಲಿಸರನ್ನು ಹಾಕಿದ್ದಾರೆ. ಅಲ್ಲಿ ಯಾವ ಕೆಲಸವೂ ನಡೆಯುತ್ತಿಲ್ಲ. ವರ್ಷಕ್ಕೆ 5 ಕೋಟಿಯಂತೆ ಅಲ್ಲಿನ ಅಧಿಕಾರಿ ನೌಕರರಿಗೆ ಸಂಬಳ ನೀಡಲಾಗುತ್ತಿದೆ. ಯಾವುದೇ ಕೆಲಸ ಮಾಡದ ಅಧಿಕಾರಿಗಳಿಗೆ ಸುಖಾಸುಮ್ಮನೆ 10 ಕೋಟಿ ಸಂಬಳ ನೀಡಲಾಗಿದೆ. ಹೀಗೆ ಆದರೆ ಶೀಘ್ರದಲ್ಲೇ ಮುಡಾ ಕಚೇರಿಗೆ ಬಾಗಿಲು ಹಾಕಬೇಕಾಗುತ್ತದೆ ಎಂದು ವಿಶ್ವನಾಥ್ ಕಿಡಿ ಕಾರಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು