ಮಾವಿನಹಳ್ಳಿ ಸಿದ್ದೇಗೌಡ ಧೀರನೂ ಅಲ್ಲ, ಶೂರನೂ ಅಲ್ಲ : ಅಹಿಂದಾ ಜಿಲ್ಲಾಧ್ಯಕ್ಷ ಎಸ್.ಸ್ವಾಮೀಗೌಡ ವ್ಯಂಗ್ಯ

ವರದಿ: ನಜೀರ್ ಅಹಮದ್
ಮೈಸೂರು : ‘ಕೊಟ್ಟ ಕುದುರೆಯನ್ನು ಏರದವ ಧೀರನೂ ಅಲ್ಲ, ಶೂರನೂ ಅಲ್ಲ’ ಎಂಬ ನಾಣ್ಣುಡಿಯಂತೆ ಸಮರ್ಥವಾಗಿ ಚುನಾವಣೆಯನ್ನು ಎದುರಿಸಲಾಗದೆ ಮತದಾನಕ್ಕೆ ಕಡೇ ಮೂರು ದಿನ ಇರುವಾಗ ಅವಿತುಕೊಂಡಿದ್ದ ಮಾವಿನಹಳ್ಳಿ ಸಿದ್ದೇಗೌಡ, ರಾಜ್ಯ ರಾಜಕಾರಣದಲ್ಲಿ ಇಷ್ಟೇಲ್ಲಾ ಅಲ್ಲೋಲ ಕಲ್ಲೋಲ ವಾಗಿದ್ದರೂ ಬಾಯಿ ಬಿಡದವ ಈಗ ಮುಡಾ ಅಧ್ಯಕ್ಷ ಮರೀಗೌಡರ ತೇಜೋವಧೆಗೆ ಮುಂದಾಗಿರುವುದು ನಾಚಿಕೆಗೇಡಿನ ವಿಚಾರವಾಗಿದ್ದು, ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಅಹಿಂದಾ ಜಿಲ್ಲಾಧ್ಯಕ್ಷ ಎಸ್.ಸ್ವಾಮೀಗೌಡ ಕಿಡಿ ಕಾರಿದರು.

ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023 ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷದ ಅಲೆ ಇತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮರೀಗೌಡರಿಗೆ ಟಿಕೆಟ್ ಎಂದು ತೀರ್ಮಾನವೂ ಆಗಿತ್ತು, ಆದರೇ, ಜೆಡಿಎಸ್‍ನಿಂದ ಬಂದ ಮಾವಿನಳ್ಳಿ ಸಿದ್ದೇಗೌಡ ಮತ್ತು ಮೂರ್ನಾಲ್ಕು ಜನ ಮುಖಂಡರು ತಾವು ಧೀರರು, ಶೂರರು ಎಂದು ಬಿಂಬಿಸಿಕೊಂಡು ಜಿ.ಟಿ.ದೇವೇಗೌಡರನ್ನು ಸೋಲಿಸಿಯೇ ತೀರುತೇವೆ ಎಂದು ಮುಖ್ಯಮಂತ್ರಿಗಳ ಮುಂದೆ ಬಡಾಯಿ ಕೊಚ್ಚಿಕೊಂಡು ಮರೀಗೌಡರಿಗೆ ನಿಗದಿಯಾಗಿದ್ದ ಕಾಂಗ್ರೆಸ್ ಟಿಕೆಟ್ ತಪ್ಪಿಸಿ ಮಾವಿನಳ್ಳಿ ಸಿದ್ದೇಗೌಡ ಟಿಕೆಟ್ ಪಡೆದರು. ಪ್ರಾರಂಭದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸಿದ್ದೇಗೌಡ ಕೊನೆ, ಕೊನೆಯಲ್ಲಿ ತೆಪ್ಪಗಾದರು. ಇದಕ್ಕೆ ಏನು ಕಾರಣ? ಯಾರೊಂದಿಗಾದರೂ ನೀವು ಶಾಮೀಲು ಆಗಿದ್ರಾ, ಕೊನೆ ಮೂರು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಅವಿತುಕೊಂಡ್ರಿ ಏಕೆ? ಕಾಂಗ್ರೆಸ್ ಪಕ್ಷದ ಸೋಲಿಗೆ ನೀವೇ ಕಾರಣವಾಗಿದ್ದು, ಮರೀಗೌಡರಲ್ಲ, ಹಗಲೂ ರಾತ್ರಿ ಪಕ್ಷದಿಂದ ಯಾವ ಸಹಾಯವನ್ನೂ ಪಡೆಯದೆ, ಮರೀಗೌಡರು ಕಾಂಗ್ರೆಸ್ ಪಕ್ಷದ ಗೆಲುವಿಗೆ ದುಡಿದ ಪರಿಣಾಮ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ 82 ಸಾವಿರ ಓಟು ಪಡೆಯಲು ಸಾಧ್ಯವಾಯಿತು. ಇದು ನಿಮ್ಮ ಮುಖ ನೋಡಿ ಜನ ಓಟು ಕೊಟ್ಟಿಲ್ಲ. ಸಿದ್ದರಾಮಯ್ಯನವರ ಮುಖ ನೋಡಿ ಜನ ಮತ ಕೊಟ್ಟಿದ್ದಾರೆ ಎನ್ನುವುದು ನಿಮಗೆ ನೆನಪಿರಲಿ. 

ಇಲವಾಲ ಹೋಬಳಿಯ ಜನರಿಗೆ ನೀವು ಯಾರಂತಾನೂ ಗೊತ್ತಿರಲಿಲ್ಲ. ಗೆಲ್ಲುವ ಸಾಧ್ಯತೆ ಇದ್ದ ಕ್ಷೇತ್ರದಲ್ಲಿ ನೀವು ಬಂದು ಪಕ್ಷವನ್ನು ಸೋಲಿಸಿದಿರಿ ಎಂದು ಕಿಡಿ ಕಾರಿದರು.

ಮುಡಾ ಅಧ್ಯಕ್ಷ ಮರೀಗೌಡರ ರಾಜಿನಾಮೆ ಕೇಳಲು ಮಾವಿನಳ್ಳಿ ಸಿದ್ದೇಗೌಡ ಯಾರು? ಎಷ್ಟು ದಿನ ಆಯ್ತು ನೀವು ಕಾಂಗ್ರೆಸ್ ಪಕ್ಷಕ್ಕೆ ಬಂದು. ಪಕ್ಷಕ್ಕೆ ಏನು ನಿಮ್ಮ ಕೊಡುಗೆ? ಮರೀಗೌಡ ಏನಾದ್ರೂ ನಿಮ್ಮ ಶಿಫಾರಸ್ಸಿನ ಮೇಲೆ ಮುಡಾ ಅಧ್ಯಕ್ಷರಾಗಿದ್ದಾರಾ? ಯಾವ ಹಕ್ಕಿನಿಂದ ನೀವು ರಾಜಿನಾಮೆ ಕೇಳ್ತೀರಿ? ಮರೀಗೌಡರ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇದೆಯಾ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2013 ಮತ್ತು 2018 ರಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ನೀವುಗಳೇ ಪ್ರಮುಖ ಕಾರಣರು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಜಾತಿ ಕಾರಣದಿಂದ ನೀವು ಟಿಕೆಟ್ ಪಡೆದರೂ ಸೋತಿರಿ, 82 ಸಾವಿರ ಓಟು ಕೊಡಿಸಿ ನಿಮ್ಮ ಮಾರ್ಯಾದೆ ಕಾಪಾಡಿದ್ದು, ಇದೇ ಸಿದ್ದರಾಮಯ್ಯ ಮತ್ತು ಮರೀಗೌಡ ಎಂಬುದು ನಿಮ್ಮ ನೆನಪಿನಲ್ಲಿರಲಿ, ಹುಷಾರ್ ಇನ್ನೊಮ್ಮೆ ಮರೀಗೌಡರ ಬಗ್ಗೆ ಮಾತನಾಡಿದರೆ ನಿಮ್ಮ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಅಹಿಂದಾ ಮುಖಂಡರಾದ ಸಂತೋಷ್ ಕುಮಾರ್, ಕೃಷ್ಣಪ್ಪ, ಶಿವಣ್ಣ, ಜಯರಾಮೇಗೌಡ, ಸಹನ, ಅರಸಿನಕೆರೆ ಸ್ವಾಮೀಗೌಡ, ದನಗಳ್ಳಿ ಬಸವರಾಜು, ಬೆಳವಾಡಿ ಲೋಕೇಶ್, ಬೀರುವಳ್ಳಿ ಕರೀಗೌಡ, ವೆಂಕಟರಮಣ, ಅಶ್ವಿನಿ ರೇವಣ್ಣ ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು