ಡಾ.ಬಿ.ಆರ್.ಅಂಬೇಡ್ಕರ್ ನವೋದಯ ಸಂಘದಿಂದ 78ನೇ ಸ್ವಾತಂತ್ರ್ಯ ದಿನಾಚರಣೆ : ಸಮಾಜ ಸೇವಕರಿಗೆ ಸನ್ಮಾನ, ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಮೈಸೂರು : ನಗರದ ಪುಲಕೇಶಿ ರಸ್ತೆ, ಶಿವಾಜಿನಗರ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ನವೋದಯ ಸಂಘದವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬೆಳಗ್ಗೆ ಸುಮಾರು 9 ಗಂಟೆಗೆ ಅಂಗನವಾಡಿ ಶಾಲೆ ಪಕ್ಕದಲ್ಲಿ ನಿರ್ಮಿಸಿದ್ದ ವೇದಿಕೆ ಬಳಿ, ಹಿರಿಯ ವಕೀಲ ಎನ್.ಜೆ.ಸ್ವಾಮಿ ದ್ವಜಾರೋಹಣ  ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬಡಾವಣೆಯ ವಯೋವೃದ್ಧೆ ಸಣ್ಣಮ್ಮ ಅವರು ತಮ್ಮ ಉಳಿತಾಯದ ಹಣದಲ್ಲಿ ಖರೀದಿಸಿದ ಸಮವಸ್ತ್ರಗಳನ್ನು ಅಂಗನವಾಡಿ ಮಕ್ಕಳಿಗೆ ವಿತರಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾಗಾಂಧಿ, ಸುಭಾಷ್ ಚಂದ್ರಬೋಸ್ ಸೇರಿದಂತೆ ವಿವಿಧ ಹೋರಾಟಗಾರರ ವೇಷಭೂಷಣ ಧರಿಸಿ ಗಮನ ಸೆಳೆದರು.

ನಂತರ ಹಿರಿಯ ವಕೀಲರಾದ ಎನ್.ಜೆ.ಸ್ವಾಮಿ, ಕಾಂಗ್ರೆಸ್ ಮುಖಂಡರು ಸಮಾಜ ಸೇವಕರೂ ಆದ ರಹಮತುಲ್ಲಾ ಟಿಪ್ಪು, ದಾನಿಗಳಾದ ಸಣ್ಣಮ್ಮ ಸೇರಿದಂತೆ ಬಡಾವಣೆಯ ಹಿರಿಯರನ್ನು ಅಭಿನಂದಿಸಲಾಯಿತು.

ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ನವೋದಯ ಸಂಘದ ಕಾರ್ಯದರ್ಶಿ ಪಿ.ರಾಚಯ್ಯ ಮಾತನಾಡಿ, 1947 ಆಗಸ್ಟ್ 15 ರಂದು ಬ್ರಿಟಿಷರ ದಾಸ್ಯದಿಂದ ಭಾರತ ಸ್ವಾತಂತ್ರ್ಯಗೊಂಡ ಈ ಶುಭದಿನವನ್ನು ಪ್ರತಿಯೊಬ್ಬ ಭಾರತೀಯರು ಗೌರವಿಸಬೇಕು. ಬ್ರಿಟೀಷರ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಿಗೊಳಿಸಲು ಸಹಸ್ರಾರು ಭಾರತೀಯರು ತಮ್ಮ ಪ್ರಾಣವನ್ನು ತ್ಯಾಗಮಾಡಿದ್ದಾರೆ. ಮಹಾತ್ಮಗಾಂಧೀಜಿ, ಜವಾಹರ್ ಲಾಲ್ ನೆಹರು, ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಬಾಯಿಪಟೇಲ್, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಸರೋಜಿನಿನಾಯ್ಡು, ಕಿತ್ತೂರುರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಭಾಯಿ ಮುಂತಾದ ಅನೇಕ ಹೋರಾಟಗಾರರ ಪರಿಶ್ರಮದಿಂದ ನಾವಿಂದು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹನೀಯರನ್ನು ನೆನೆದು ಆತ್ಮಪೂರ್ವಕವಾಗಿ ಗೌರವ ಸಲ್ಲಿಸ ಬೇಕಿದೆ ಎಂದರು.

ಅಧ್ಯಕ್ಷರಾದ ಎಸ್.ರಾಚಯ್ಯ, ಕಾರ್ಯದರ್ಶಿ ಪಿ.ರಾಚಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ರಂಗಸ್ವಾಮಿ, ಸಿದ್ದಪ್ಪಾಜಿ, ಸಿದ್ದರಾಜು, ಪುಟ್ಟಬುದ್ದಿ ಆರ್.,ರಾಜ, ಅಪ್ಪು, ಮಹೇಶ್, ಗೋಪಿ, ಯುವ, ಶರತ್, ರಾಜೇಶ್, ಸಂತೋಷ್ ಕುಮಾರ್, ತರುಣ್, ವರುಣ್, ಚೇತನ್, ಅಂಗನವಾಡಿ ಕಾರ್ಯಕರ್ತೆ ವಿದ್ಯಾ ಮತ್ತಿತರರು ಇದ್ದರು. 


 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು