ಸುಶಿಕ್ಷಿತ ಸಮಾಜಕ್ಕೆ ಶಿಕ್ಷಣ ಅಗತ್ಯ : ಪಿಎಸ್‌ಐ ಸಿ.ಎಂ.ರೂಪೇಶ್
ಜುಲೈ 31, 2024
ಗೌಸಿಯಾನಗರ ಬಡಾವಣೆಯಲ್ಲಿ ಯುವಕರಿಂದ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ
ಮೈಸೂರು : ಸುಶಿಕ್ಷಿತ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಅತ್ಯಗತ್ಯವಾಗಿದ್ದು, ಬಾಲ್ಯದಲ್ಲೇ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸುವುದು ಶಿಕ್ಷಕರು, ಪೋಷಕರು ಮತ್ತು ಸಮುದಾಯದ ಜವಾಬ್ದಾರಿ ಎಂದು ಉದಯಗಿರಿ ಪೊಲೀಸ್ ಠಾಣೆಯ ಪಿಎಸ್‌ಐ ಸಿ.ಎಂ.ರೂಪೇಶ್ ಹೇಳಿದರು. ಗೌಸಿಯಾನಗರ ಬಡಾವಣೆಯಲ್ಲಿ ಬುಧವಾರ ಗೌಸಿಯಾನಗರದ ಯುವಕರ ಸಂಘ ಏರ್ಪಡಿಸಿದ್ದ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗೌಸಿಯಾನಗರ ಬಡಾವಣೆ ಎಂದಾಕ್ಷಣಾ ಎಲ್ಲರ ಮನದಲ್ಲೂ ಯುವಕರು, ಅಪ್ರಾಪ್ತರು, ಗಾಂಜಾ ಹೊಡೆಯುವುದು, ವ್ಹೀಲಿಂಗ್ ಮಾಡುವುದು, ಪೋಲಿ ಹುಡುಗರ ಅಲೆದಾಟ. ಅಪ್ರಾಪ್ತರು ಪಾರ್ಕ್‌ಗಳಲ್ಲಿ ರಸ್ತೆ ಬದಿಯಲ್ಲಿ ಸಲ್ಯೂಷನ್ ಬಳಕೆ ಮಾಡುತ್ತಾರೆಂಬ ಕಲ್ಪನೆ ಮೂಡಿಬಂದಿದೆ. ಇದನ್ನು ಹೋಗಲಾಡಿಸುವುದು ಅತ್ಯಗತ್ಯವಾಗಿದ್ದು, ಯುವಕರು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಬಡಾವಣೆಗಳಲ್ಲಿ ಸಮುದಾಯಕ್ಕೆ ಒಳಿತಾಗುವ ಸಂಘಟನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡು ಯುವಕರನ್ನು ಸರಿದಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಒಬ್ಬ ಸಾಮಾನ್ಯ ಯುವಕರಾಗಿದ್ದ ಅಂಬೇಡ್ಕರ್ ತಮ್ಮ ಶಿಕ್ಷಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಆಗಿ ಜಗತ್ತೆ ತಮ್ಮತ್ತ ತಿರುಗುವಂತೆ ಮಾಡಿದ್ದಾರೆ. ಈ ಬದಲಾವಣೆಗೆ ಅವರ ಶಿಕ್ಷಣವೇ ಪ್ರಮುಖ ಕಾರಣ, ಇಂದಿನ ಮಕ್ಕಳಲ್ಲೂ ಒಬ್ಬ ಅಂಬೇಡ್ಕರ್, ಒಬ್ಬ ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಕಲ್ಪನಾ ಚಾವ್ಲಾ ಅವರಂತಹ ಸಾಧಕರು ಇದ್ದಾರೆ. ಅವರಲ್ಲಿನ ಪ್ರತಿಭೆಯನ್ನು ನಾವು ಹೊರತರಬೇಕಿದೆ. ಈ ನಿಟ್ಟಿನಲ್ಲಿ ಗೌಸಿಯಾ ನಗರದ ಯುವ ಮುಖಂಡ ಜುನೈದ್ ಮತ್ತು ಅವರ ಗೆಳೆಯರು ಇಂದು ಶಾಲಾ ಮಕ್ಕಳಿಗೆ ಪೊಲೀಸರ ಮೂಲಕ ನೋಟ್‌ಬುಕ್ ವಿತರಣೆ ಮಾಡಿಸಿ ಮಕ್ಕಳಲ್ಲಿ ಪೊಲೀಸರೆಂದರೆ ಭಯ ಪಡುವ ಅಗತ್ಯವಿಲ್ಲ. ಅವರು ಕೇವಲ ನಮ್ಮ ರಕ್ಷಕರು ಎಂಬ ಮನೋಭಾವನೆ ಮೂಡಿಸಿರುವುದು ಮಕ್ಕಳಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಶ್ಲಾಘಿಸಿದರು.
ಉದಯಗಿರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಎನ್.ಸುಧಾಕರ್ ಮಾತನಾಡಿ, ಉದಯಗಿರಿ ಠಾಣಾ ವ್ಯಾಪ್ತಿಯ ಶಾಲಾ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು, ಅವರಲ್ಲಿ ಉತ್ತಮ ನಡವಳಿಕೆ ರೂಢಿಸುವಂತೆ ಮಾಡಲು ಗೌಸಿಯಾನಗರ ಬಡಾವಣೆಯ ಯುವಕರು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದು ಕಳೆದ ಒಂದು ತಿಂಗಳ ಹಿಂದೆಯೇ ನಡೆಯಬೇಕಿತ್ತು. ಕಾರಣಾಂತರದಿಂದ ಮುಂದೂಡಿ ಇಂದು ನಡೆಯುತ್ತಿದೆ. ಶಾಲಾ ಮಕ್ಕಳಿಗೆ ನಮ್ಮ ದೇಶದ ಪ್ರಮುಖ ದಾರ್ಶನಿಕರು, ಸಾಧಕರು, ಹೋರಾಟಗಾರರು ಮತ್ತು ವಿವಿಧ ನಾಯಕರ ಜೀವನ ಚರಿತ್ರೆಯನ್ನು ತಿಳಿಸುವುದರ ಮೂಲಕ ಅವರನ್ನು ಸಾಧನೆಯತ್ತ ಪ್ರೇರೇಪಣೆ ಉಂಟು ಮಾಡಬೇಕು. ಆರ್ಥಿಕತೆಯಿಂದ ವಂಚಿತರಾಗಿ ಬಡ ಮಕ್ಕಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಬಾರದು ಎಂಬ ಮಹತ್ವಾಕಾಂಕ್ಷೆ ಇಲ್ಲಿನ ಯುವ ಸಮುದಾಯಕ್ಕಿದೆ. ಅಗತ್ಯವಿದ್ದವರಿಗೆ ನಾವು ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ ಎಂದರು. ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯೆ ಪ್ರೇಮಕುಮಾರಿ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಈ ಭಾಗದಲ್ಲಿ ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಕ್ಕಳೂ ಸಹ ಉನ್ನತ ಶಿಕ್ಷಣ ಪಡೆಯಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಇದಕ್ಕೆ ಸಮುದಾಯದ ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂದು ಸೈಯದ್ ಜುನೇದ್ ನೇತೃತ್ವದ ಯುವಕರು ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮಾಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳ ೫೦೦ಕ್ಕೂ ಹೆಚ್ಚು ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸೈಯದ್ ಜುನೇದ್, ಸೈಯದ್ ಬಶೀರ್, ಸೈಯದ್ ಝಕೀರ್, ಸೈಫ್, ಸಲೀಂ, ಮುಬಾರಕ್ ಮತ್ತಿತರರು ಇದ್ದರು.
ನಮ್ಮ ಬಡಾವಣೆಯ ಶಾಲಾ ಮಕ್ಕಳು ಆರ್ಥಿಕವಾಗಿ ತುಂಬಾ ಹಿಂದುಳಿದ ಕುಟುಂಬದಿಂದ ಬಂದವರಾಗಿದ್ದಾರೆ. ಇವರ ಶಿಕ್ಷಣಕ್ಕೆ ನೆರವಾಗಲು ನಾವು ಉದಯಗಿರಿ ಪೊಲೀಸ್ ಠಾಣೆಯ ಸಹಕಾರದೊಂದಿಗೆ ನೋಟ್‌ಬುಕ್ ವಿತರಣೆ ಮಾಡಿದ್ದೇವೆ. ಮುಂದೆಯೂ ಅಗತ್ಯವಿದ್ದವರಿಗೆ ಶೈಕ್ಷಣಿಕ ನೆರವು ನೀಡುತ್ತೇವೆ. ಸೈಯದ್ ಜುನೇದ್ ಯುವ ಮುಖಂಡರು.
0 ಕಾಮೆಂಟ್‌ಗಳು