ಹೂಟಗಳ್ಳಿ ನಗರಸಭೆ ದಿವ್ಯ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ ಹಸು ಸಾವು : ಕರುಳು ಹಿಂಡಿದ ಕರುವಿನ ರೋಧನ


 ಕಿಶೋರ್ ನಾಗ್, ಮೈಸೂರು

ಮೈಸೂರು : ಹೂಟಗಳ್ಳಿ ನಗರಸಭೆ ನಿರ್ಲಕ್ಷ್ಯದಿಂದ ಇಲ್ಲಿನ ಎಸ್‌ಆರ್‌ಎಸ್ ಬಡಾವಣೆಯಲ್ಲಿ ೧.೨೦ ಲಕ್ಷ ರೂ. ಬೆಲೆಬಾಳುವ ಗರ್ಭಿಣಿ ಹಸುವೊಂದು ರಸ್ತೆ ಬದಿಯಲ್ಲಿದ್ದ ಬೋರ್‌ವೆಲ್ ವಿದ್ಯುತ್ ಸಂಪರ್ಕ ಕಲ್ಪಿಸುವ ಸ್ವಿಚ್‌ಬಾಕ್ಸ್ ಸ್ಪರ್ಶಿಸಿ ಸ್ಥಳದಲ್ಲೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಬಡಾವಣೆಯ ರವಿಕುಮಾರ್ ಎಂಬುವರು ಮಂಗಳವಾರ ಬೆಳಗ್ಗೆ ತಮ್ಮ ಮನೆಯಿಂದ ಹಸುವನ್ನು ಜಮೀನಿನ ಬಳಿ ಕಟ್ಟಿಹಾಕಲು ಕರೆದುಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಶಾರ್ಟ್ ಸರ್ಕ್ಯೂಟ್‌ಗೆ ಒಳಗಾಗಿದ್ದ ವಿದ್ಯುತ್ ಸ್ವಿಚ್‌ಬಾಕ್ಸ್ ಪಕ್ಕದ ಕಬ್ಬಿಣದ ಪೈಪ್ ಸ್ಪರ್ಷಿಸಿ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದೆ. ಈ ವೇಳೆ ಹಸುವಿನ ಹಗ್ಗ ಹಿಡಿದಿದ್ದ ರವಿಗೂ ವಿದ್ಯುತ್ ಸ್ಪಷ್ಧವಾಗಿ ಆತ ಹಗ್ಗವನ್ನು ತಕ್ಷಣ ಎಸೆದು ಪ್ರಾಣಾಪಾಯದಿಂದ ಪಾರಾದರು ಎನ್ನಲಾಗಿದೆ.

ಈ ಹಿಂದೆ ಚರಂಡಿ ಮೇಲಿದ್ದ ಸ್ವಿಚ್‌ಬಾಕ್ಸ್ ಅನ್ನು ಅಲ್ಲಿಂದ ರಸ್ತೆಗೆ ಸ್ಥಳಾಂತರಿಸಲಾಗಿತ್ತು. ರಸ್ತೆಯೂ ಕಿರಿದಾದ ಕಾರಣ ಸ್ವಿಚ್‌ಬಾಕ್ಸ್ ಪಕ್ಕದಲ್ಲಿದ್ದ ಕಬ್ಬಿಣದ ಪೈಪ್ ಶಾರ್ಟ್ ಸರ್ಕ್ಯೂಟ್‌ನಿಂದಾಗ ಈ ಅವಘಡ ಸಂಭವಿಸಿದೆ. ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಮಕ್ಕಳು ಸಾರ್ವಜನಿಕರು ತಿರುಗಾಡುತ್ತಾರೆ. ಅಕಸ್ಮಾತ್ ಪ್ರಾಣಾಪಾಯ ಉಂಟಾದರೆ ಯಾರು ಹೊಣೆ, ಕೂಡಲೇ ಇದನ್ನು ದೂರಕ್ಕೆ ಸ್ಥಳಾಂತರಿಸಬೇಕೆಂದು ಸ್ಥಳೀಯರಾದ ಶಿವಣ್ಣ ಆಗ್ರಹಿಸಿದರಲ್ಲದೇ, ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಆಧಾರವಾಗಿದ್ದ ಹಸುವನ್ನು ಕಳೆದುಕೊಂಡು ರೈತಕುಟುಂಬ ಬೀದಿಗೆ ಬಿದ್ದಿಗೆ ನಗರಸಭೆಯವರು, ವಿದ್ಯುತ್ ಇಲಖೆಯವರು ಸೂಕ್ತ ಪರಿಹಾರ ನೀಡಬೇಕೆಂದು ಶಿವಣ್ಣ ಒತ್ತಾಯಿಸಿದರು.

ಸ್ಥಳಕ್ಕೆ ಹೂಟಗಳ್ಳಿ ಠಾಣೆಯ ಪೊಲೀಸರು, ಚೆಸ್ಕಾಂ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಿಚ್‌ಬಾಕ್ಸ್ ಶಾರ್ಟ್ ಸರ್ಕ್ಯೂಟ್‌ಗೆ ಒಳಗಾಗಿದ್ದನ್ನು ಪರಿಶೀಲಿಸಿದರು. ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ಹಸುವಿನ ಅಂತ್ಯಸಂಸ್ಕಾರ ನಡೆಸಲಾಯಿತು.


ಕರುಳು ಹಿಂಡಿದ ಕರುವಿನ ರೋಧನ:

ವಿದ್ಯುತ್ ಸ್ಪರ್ಷಿಸಿ ಹಸು ಒದ್ದಾಡಿ ಪ್ರಾಣ ಬಿಟ್ಟಿದ್ದನ್ನು ಕಣ್ಣಾರೆ ಕಂಡ ಕರುವಿನ ರೋಧನ ಕರುಳು ಹಿಂಡಿತು. ಮೃತ ತಾಯಿಯನ್ನು ಮೂಸಿ, ಸ್ಪರ್ಷಿಸಿ, ಅತ್ತಿತ್ತ ಒದ್ದಾಡಿ ರೋಧಿಸಿತು. ಬಳಿಕ ಹಸುವಿನ ಅಂತ್ಯಸಂಸ್ಕಾರ ನಡೆಸಿದಾಗ ಮಣ್ಣನ್ನು ಕಾಲಿನಿಂದ ಕೆರೆಯುವುದು, ಅತ್ತಿಂದಿತ್ತ ಓಡಾಡುವುದು, ಕೊಂಬಿನಲ್ಲಿ ಮಣ್ಣನ್ನು ಎತ್ತುವುದು ಮಾಡುತ್ತಿದ್ದನ್ನು ನೋಡಿದ ಸ್ಥಳೀಯರು ಮರುಗಿದರು. ಕೆಲಕಾಲ ಕರುವು ಅಲ್ಲಿಂದ ಕದಲಲೇ ಇಲ್ಲ. ಬಳಿಕ ಮಾಲೀಕ ರವಿ ಕರುವನ್ನು ರಮಿಸಿ ಮನೆಗೆ ಕರೆತಂದರು. ಮನೆಯಲ್ಲೂ ಕರುವಿನ ಹಗ್ಗ ಬಿಚ್ಚಿದರೆ ನೇರವಾಗಿ ಅದರ ತಾಯಿಯನ್ನು ಹೂತು ಹಾಕಿದ ಸ್ಥಳಕ್ಕೆ ಓಡುತ್ತಿರುವುದನ್ನು ನೋಡಿದ ಜನರು ಕಂಬನಿ ಮಿಡಿದರು.

ಹಸು ಕಳೆದುಕೊಂಡು ಸಮಾಧಿ ಬಳಿ ರೋಧಿಸುತ್ತಿರುವ ರೈತ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು