ಮೈಸೂರು ಮಹಾನಗರ ಪಾಲಿಕೆ ವಲಯ-೭ರ ಸಹಾಯಕ ಆಯುಕ್ತರಾದ ಎಂ.ನಂಜುಂಡಯ್ಯ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಜುಲೈ 31, 2024
ವರದಿ-ನಜೀರ್ ಅಹಮದ್ ಮೈಸೂರು : ಸರ್ಕಾರ ನಮಗೆ ಕೈತುಂಬಾ ಸಂಬಳ ಕೊಡುತ್ತದೆ ನಾವೂ ಸಹ ಮನಸ್ಸಿಟ್ಟು ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಸರ್ಕಾರ ಮತ್ತು ನಾವು ಕೆಲಸ ಮಾಡುವ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಮೂಡುತ್ತದೆ ಎಂದು ಬುಧವಾರ ನಿವೃತ್ತರಾದ ಮೈಸೂರು ಮಹಾನಗರಪಾಲಿಕೆ ವಲಯ-೭ರ ಸಹಾಯಕ ಆಯುಕ್ತರಾದ ಎಂ.ನಂಜುಂಡಯ್ಯ ಹೇಳಿದರು.
ಈರನಗೆರೆ ಬಡಾವಣೆಯಲ್ಲಿರುವ ಪಾಲಿಕೆ ವಲಯ-೭ರ ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳು ನೀಡಿದ ಹೃದಯಸ್ಪರ್ಶಿ ಬೀಳ್ಕೊಡುಗೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕೆಎಎಸ್ ಅಧಿಕಾರಿಯಾಗಿ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ತಹಸೀಲ್ದಾರ್ ಆಗಿ ಕೆಲಸ ಮಾಡಿ, ಮೂರು ವರ್ಷದ ಹಿಂದೆ ಮೈಸೂರು ಮಹಾನಗರ ಪಾಲಿಕೆಗೆ ವಲಯ-೭ರಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದೇನೆ. ೩೬ ವರ್ಷಗಳ ಸುದೀರ್ಘ ಸರ್ಕಾರಿ ಸೇವೆಯಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಸಾರ್ವಜನಿಕ ಕೆಲಸ ಮಾಡಿದ ಸಂತೃಪ್ತಿ ಇದೆ. ಮನೆಯಲ್ಲಿ ರಜೆಯನ್ನು ಕಳೆದಿದ್ದು ಕಮ್ಮಿ, ಕೆಲಸಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ನನ್ನ ಸಹೋದ್ಯೋಗಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಕಾರಣ ನನಗೆ ಉತ್ತಮವಾಗಿ ದಕ್ಷತೆಯಿಂದ, ಪ್ರಾಮಾಣಿಕವಾಗಿ ಕೆಲಸ ಮಡಲು ಸಾಧ್ಯವಾಗಿದೆ. ಅಧಿಕಾರಿಯ ದರ್ಪ ನನಗೆ ಎಂದಿಗೂ ಬರಲಿಲ್ಲ. ದೊಡ್ಡ ಅಧಿಕಾರಿ ಎನ್ನುವ ಅಹಂ ತೆಗೆದರೆ ಸಮುದಾಯದ ಸಹಕಾರ, ಸಹೋದ್ಯೋಗಿಗಳ ಪ್ರೀತಿ ಸಿಗುತ್ತದೆ. ಇದರಿಂದ ನಮಗೆ ಸರಾಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಜೀವನವನ್ನು ನನ್ನ ಕುಟುಂಬದವರೊಂದಿಗೆ ಕಳೆಯುವ ಮನಸ್ಸಿದೆ. ನನ್ನ ಊರಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ನಾನು ಕೆಲಸದ ಒತ್ತಡದಿಂದ ಭಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಬಹುದು ಎಂದು ಹೇಳಿದರು.
ವಲಯ-೯ರ ಸಹಾಯಕ ಆಯುಕ್ತರಾದ ಶಿವಕುಮಾರ್ ಮಾತನಾಡಿ, ನಂಜುಂಡಯ್ಯ ಅವರು ತಮ್ಮ ಅವಧಿಯಲ್ಲಿ ಉತ್ತಮವಾಗಿ, ಪ್ರಾಮಣಿಕತೆಯಿಂದ ಕೆಲಸ ಮಾಡಿದ್ದಾರೆ. ಇವರ ಕರ್ತವ್ಯನಿಷ್ಠೆ ಪ್ರಶ್ನಾತೀತ, ಯಾರಿಗೂ ತೊಂದರೆ ಕೊಟ್ಟವರಲ್ಲ. ತಮ್ಮ ಕಿರಿಯ ಅಧಿಕಾರಿಗಳಿಗೆ ಉತ್ತಮ ಸಲಹೆ ಸಹಕಾರ ಕೊಟ್ಟು ಕೆಲಸ ಕಲಿಸಿದ್ದಾರೆ ಎಂದರು.
ಮಹಾನಗರಪಾಲಿಕೆ ಮಾಜಿ ಸದಸ್ಯೆ ಅಶ್ವಿನಿ ಶರತ್ ಮಾತನಾಡಿ, ನಂಜುಂಡಯ್ಯ ಅವರು ಮೂರು ಮುಕ್ಕಾಲು ವರ್ಷ ವಲಯ-೭ರ ಸಹಾಯಕ ಆಯುಕ್ತರಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ವಾರ್ಡಿನ ಯಾವುದೇ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಇಂತಹ ಜನಾನುರಾಗಿ ಅಧಿಕಾರಿಗಳು ಸಿಗುವುದು ಅಪರೂಪ ಎಂದರು.
ಇದೇ ಸಂದರ್ಭದಲ್ಲಿ ಹಲವಾರು ಕಿರಿಯ ಅಧಿಕಾರಿಗಳು ಮಾತನಾಡಿ, ಎಂ.ನಂಜುಂಡಯ್ಯ ಅವರು ತಾವು ಸಹಾಯಕ ಆಯುಕ್ತರು ಎನ್ನುವ ಯಾವುದೇ ಹಮ್ಮು, ಬಿಮ್ಮು ಇಲ್ಲದೆ ನಮ್ಮ ಮನೆಯ ಯಜಮಾನನ ರೀತಿಯಲ್ಲಿ ನಮಗೆ ಕೆಲಸದಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ ಕಲಿಸಿದ್ದಾರೆ. ಕಚೇರಿಗೆ ಬರುವ ಯಾವುದೇ ಸಾರ್ವಜನಿಕರ ಜತೆ ಎಂದಿಗೂ ಅವರು ಜೋರಾಗಿ ಮಾತನಾಡಿಲ್ಲ ಎಂದು ತಮ್ಮ ನೆನಪುಗಳನ್ನು ಮೆಲುಕುಹಾಕಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಅಕ್ರಂ, ವಲಯ-೮ರ ಸಹಾಯಕ ಆಯುಕ್ತರಾದ ಆನಂದ್, ಡಿಓ ರಾಜೀವ್‌ನಾಥ್, ಕಂದಾಯ ಅಧಿಕಾರಿ ಲೋಕೇಶ್, ಎಆರ್‌ಓ ಸಿದ್ದಪ್ಪ, ಇಂಜಿನಿಯರ್‌ಗಳಾದ ರಾಕೇಶ್, ರಾಜೇಶ್, ಪ್ರಿಯಾಂಕ, ನಿವೃತ್ತ ಅಧಿಕಾರಿ ಯೋಗೇಂದ್ರ, ಸುಮತಿ, ದರ್ಶನ್, ಮಹದೇವು, ಹಬೀಬ್, ಲೋಕೇಶ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು