ವರದಿ: ನಜೀರ್ ಅಹಮದ್
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯಾಗಿ ನಾಡಿನಲ್ಲಿ ಸುದಿರ್ಘವಾಗಿ ರಾಜಕಾರಣ ಮಾಡಿದವರು. ಯಾವುದೇ ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕ ಜನಾನುರಾಗಿ ರಾಜಕಾರಣಿ, ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಅವರನ್ನು ಏನಾದರೂ ಮಾಡಿ ಜೈಲಿಗೆ ಕಳಿಸಲು ಬಿಜೆಪಿ ಮತ್ತು ಜೆಡಿಎಸ್ ಸಂಚು ರೂಪಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ದಲಿತರು ಮತ್ತು ಹಿಂದುಳಿದವರ ವಿರೋಧಿಗಳಾಗಿದ್ದು, ಈ ಹಿಂದೆಯೂ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪ, ಧರಂಸಿಂಗ್, ವೀರಪ್ಪ ಮೋಯ್ಲಿ ಮುಂತಾದವರನ್ನು ಬೆಳೆಯಲು ಬಿಡಲಿಲ್ಲ. ಅವರುಗಳು ಮುಖ್ಯಮಂತ್ರಿಗಳಾದರೂ ಐದು ವರ್ಷ ಅಧಿಕಾರ ಪೂರೈಸಲಿಲ್ಲ. ಹೀಗಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಪ್ರಿಯ ಆಡಳಿತ ನೀಡಿದ ಸಿದ್ದರಾಮಯ್ಯ ಅವರ ಮೇಲೆ ಹೊಟ್ಟೆಕಿಚ್ಚಿನಿಂದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಈ ಹಿಂದೆ ಕರೋನ ಸಂದರ್ಭದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ 40 ಸಾವಿರ ಕೋಟಿ ಭ್ರಷ್ಟಾಚಾರ ನಡೆಸಿದೆ ಎಂದು ಸ್ವತಃ ಅದೇ ಪಕ್ಷದ ಹಿರಿಯ ಮುಖಂಡರಾದ ಬಸವರಾಜ ಪಾಟೀಲ್ ಯತ್ನಾಳ ಅವರು ತಮ್ಮ ಪಕ್ಷದವರ ವಿರುದ್ಧವೇ ಆರೋಪಿಸಿದ್ದರೂ, ಅಂದಿನ ಮುಖ್ಯಮಂತ್ರಿಗಳು ರಾಜಿನಾಮೆ ನೀಡಲಿಲ್ಲ, ತನಿಖೆ ನಡೆಸಲಿಲ್ಲ. ಅಥವಾ ಯತ್ನಾಳ್ ಅವರ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಇದು ನಿಜ ಎಂದು ಒಪ್ಪಿಕೊಂಡು ಸುಮ್ಮನಾಯಿತು. ಆದರೇ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಜಸ್ಟೀಸ್ ನಾಗಮೋಹನ್‍ದಾಸ್ ಆಯೋಗ ರಚಿಸಿ ತನಿಖೆ ನಡೆಸುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಬಿಜೆಪಿಯವರು ಸಿದ್ದರಾಮಯ್ಯ ಅವರ ರಾಜಿನಾಮೆಯನ್ನು ಯಾವ ನೈತಿಕತೆ ಇಟ್ಟು ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಇನ್ನು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪುಟ್ಟಸಿದ್ದೇಗೌಡ ಅವರು, 2011 ರಲ್ಲಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ 48 ನಿವೇಶನಗಳು ಮಂಜೂರಾಗಿದ್ದವು ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿ ಇದಕ್ಕೆ ಸಂಬಂಧಿಸಿದಂತೆ ದಾಖಲೆಯನ್ನೂ ಸರ್ಕಾರಕ್ಕೆ ನೀಡಿದ್ದರು. ಈ ಪ್ರಕರಣವೂ ತನಿಖೆ ನಡೆಯಬೇಕು. 2000 ದಿಂದ 2024 ರವರೆಗಿನ ಮೂಡಾ ನಿವೇಶನ ಹಂಚಿಕೆಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದ್ದು, ಬಿಜೆಪಿ ಮತ್ತು ಜೆಡಿಎಸ್ ಬಂಡವಾಳ ಬಯಲಾಗುತ್ತದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮೇಲೆ ಆರೋಪ ಬಂದಾಕ್ಷಣ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು, ಇದೀಗ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಬಿಜೆಪಿ ಅಥವಾ ಜೆಡಿಎಸ್ ತಮ್ಮ ಕಾಲದ ಯಾವುದೇ ಹಗರಣಗಳನ್ನು ಇಷ್ಟು ತ್ವರಿತವಾಗಿ ತನಿಖೆ ನಡೆಸಲು ಮುಂದಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಂಗಿಯಲ್ಲ. ಅವರ ಬೆನ್ನಹಿಂದೆ ಈ ನಾಡಿನ ಸಮಸ್ತ ಜನರಿದ್ದಾರೆ. ಇನ್ನು ಮುಂದಾದರೂ ಎರಡೂ ಪಕ್ಷಗಳು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕೆಂದು ಪುಟ್ಟಸಿದ್ದೇಗೌಡ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಎನ್.ಲೋಕೇಶ್, ಕೆ.ಎಸ್.ಅನ್ನದಾನಿ, ಲಕ್ಷ್ಮಣ್ ಇದ್ದರು.
0 ಕಾಮೆಂಟ್‌ಗಳು